

ಶ್ರೀಹರಿಕೋಟ: ಚಂದ್ರಯಾನ-3 ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಮತ್ತೊಂದು ರಾಕೆಟ್ ಉಡಾವಣೆ ಮಾಡಿದೆ. ಸಿಂಗಾಪೂರದ 6 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ-ಸಿ56 ರಾಕೆಟ್ ಅನ್ನು ಇಂದು ಬೆಳಗ್ಗೆ 6.30ಕ್ಕೆ ಆಂಧ್ರ ಪ್ರದೇಶದದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಎಸ್ಡಿಎಸ್ಸಿ) ದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಇಸ್ರೋ ತನ್ನ 56ನೇ ಕಾರ್ಯಾಚರಣೆಯಲ್ಲಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸದ್ಯ ಉಡಾವಣೆ ಮಾಡಲಾಗಿರುವ ರಾಕೆಟ್ನ ಮೇಲಿನ ಹಂತವನ್ನು ಕಡಿಮೆ ಕಕ್ಷೆಯಲ್ಲಿ ಇರಿಸಿ, ಅದರಲ್ಲಿರುವ ಉಪಗ್ರಹಗಳನ್ನು ಸ್ಥಾಪಿಸಲಾಗುತ್ತದೆ.
ಇಸ್ರೋ ಪ್ರಕಾರ PSLV-C56 ರಾಕೆಟ್ ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಮೊದಲ ಉಡಾವಣಾ ಪ್ಯಾಡ್ (FLP) ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. PSLV-C56 / DS-SAR ಎಂಬುದು ಸಿಂಗಾಪುರದ ST ಇಂಜಿನಿಯರಿಂಗ್ಗಾಗಿ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ನ (NSIL) ಮೀಸಲಾದ ಕಮರ್ಷಿಯಲ್ ಮಿಷನ್ ಆಗಿದೆ.
ಈ DS-SAR ರಾಡಾರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಶನ್ ಉಪಗ್ರಹವು, ಈ ಮಿಷನ್ನ ಪ್ರಾಥಮಿಕ ಉಪಗ್ರಹವಾಗಿದೆ. ಇದು ಎರಡು ಆಯಾಮದ ಚಿತ್ರಗಳನ್ನು ಅಥವಾ ವಸ್ತುಗಳ ಮೂರು ಆಯಾಮದ ಪುನರ್ನಿರ್ಮಾಣಗಳನ್ನು ರಚಿಸುವ ಸಿಂಥೆಟಿಕ್ ಅಪರ್ಚರ್ ರಾಡಾರ್ ಹೊಂದಿದೆ. ಇದು ಸೇರಿದಂತೆ ಸಿಂಗಾಪುರಕ್ಕೆ ಸಂಬಂಧಿಸಿದ 6 ಉಗ್ರಹಗಳನ್ನು ಸಹ PSLV-C56 ರಾಕೆಟ್ ಹೊತ್ತೊಯ್ದಿದೆ.
DS-SAR ಉಪಗ್ರಹವನ್ನು DSTA (ಸಿಂಗಾಪೂರ್ ಸರ್ಕಾರವನ್ನು ಪ್ರತಿನಿಧಿಸುತ್ತದೆ) ಮತ್ತು ST ಇಂಜಿನಿಯರಿಂಗ್ ನಡುವಿನ ಪಾಲುದಾರಿಕೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಉಪಗ್ರಹವು ಸ್ಥಾಪನೆಯಾಗಿ ಕಾರ್ಯಾಚರಣೆ ಆರಂಭಿಸಿದ ನಂತರ ಸಿಂಗಾಪುರ ಸರ್ಕಾರದ ವಿವಿಧ ಏಜೆನ್ಸಿಗಳು ಉಪಗ್ರಹ ಚಿತ್ರಣಗಳನ್ನು ಬಳಸಿಕೊಳ್ಳಲಿವೆ.
ST ಇಂಜಿನಿಯರಿಂಗ್ ಕಂಪನಿಯು ತಮ್ಮ ವಾಣಿಜ್ಯ ಗ್ರಾಹಕರಿಗೆ ಬಹು-ಮಾದರಿ ಮತ್ತು ಹೆಚ್ಚಿನ ಪ್ರತಿಕ್ರಿಯೆ ಚಿತ್ರಣ ಮತ್ತು ಜಿಯೋಸ್ಪೇಷಿಯಲ್ ಸೇವೆಗಳಿಗಾಗಿ ಇದನ್ನು ಬಳಸುತ್ತದೆ. DS-SAR ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (IAI) ಅಭಿವೃದ್ಧಿಪಡಿಸಿದ ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ಪೇಲೋಡ್ ಅನ್ನು ಹೊಂದಿದೆ. (ಏಜೆನ್ಸೀಸ್)