ಇವರ ಅವಧಿಯಲ್ಲಿ ಯಾರಿಗೂ ನ್ಯಾಯ ಸಿಗಲ್ಲ; 2 ತಿಂಗಳಲ್ಲಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ: ಬಸವರಾಜ ಬೊಮ್ಮಾಯಿ

Untitled design - 2023-07-25T134803.841
Published on

ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತದ ವಿರುದ್ಧ ಇಂದು ತಮ್ಮ ಆರ್​.ಟಿ ನಗರದ ನಿವಾಸದಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಇವರ ಅವಧಿಯಲ್ಲಿ ಯಾರಿಗೂ ನ್ಯಾಯ ಸಿಗುವುದಿಲ್ಲ. ಎರಡೇ ತಿಂಗಳಲ್ಲಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

"ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ದಿನದಿಂದಲೂ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಸಿಎಂ ಆಯ್ಕೆಗಾಗಿ ಸೀಕ್ರೆಟ್ ಮತ ಮಾಡಿದರು. ಈಗ ಸಚಿವರ ವಿರುದ್ಧ ಶಾಸಕರ ಅಸಮಾಧಾನ ಭುಗಿಲೆದ್ದಿದೆ. ಭ್ರಷ್ಟಾಚಾರದಲ್ಲಿ ಪೈಪೋಟಿ ಇರುವುದರಿಂದ ಅಸಮಾಧಾನ ವ್ಯಕ್ತವಾಗುವುದು ಸಹಜ. ಇದನ್ನು ಯಾರೂ ಕೂಡ ಮರೆಮಾಚಲು ಸಾಧ್ಯವಿಲ್ಲ. ಈಗ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ, ಡಿಕೆಶಿ ಹೇಳಿಕೆಗಳಿಂದಲೇ ಸರ್ಕಾರದಲ್ಲಿ ಅಸ್ಥಿರತೆ ಹುಟ್ಟುತ್ತಿರುವುದು" ಎಂದು ಹೇಳಿದರು.

"ಡಿ.ಕೆ. ಶಿವಕುಮಾರ್​ ಸಿಂಗಾಪುರ ಬಗ್ಗೆ ಹೇಳಿಕೆ ಕೊಡುವ ಅಗತ್ಯವಿರಲಿಲ್ಲ. ಅವರಿಗೆ ಸಂಪೂರ್ಣ ಬಹುಮತ ಇದೆ. ಉತ್ತಮ ಆಡಳಿತ ಕೊಡಬಹುದು. ಆದ್ರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಹತ್ಯೆಗಳು ನಡೆಯುತ್ತಿವೆ. ನಿನ್ನೆ ಹೈಕೋರ್ಟ್ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಕೂಡ ಬಂದಿದೆ. ಅವರಿಗೆ ಈ ಪರಿಸ್ಥಿತಿ ಬಂದರೆ, ಇನ್ನು ಸಾಮಾನ್ಯರ ಗತಿಯೇನು? ಇವರ ಅವಧಿಯಲ್ಲಿ ಯಾರಿಗೂ ನ್ಯಾಯ ಸಿಗುವುದಿಲ್ಲ. ಎರಡೇ ತಿಂಗಳಲ್ಲಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ" ಎಂದು ಹೇಳಿದರು.

"ರಾಜ್ಯದಲ್ಲಿ ಮಳೆಯೂ ಇದೆ, ಬರವೂ ಇದೆ. ಸರ್ಕಾರಕ್ಕೆ ಯಾವುದನ್ನೂ ನಿಭಾಯಿಸಲು ಆಗುತ್ತಿಲ್ಲ. ಈ ಸರ್ಕಾರ ಆಂತರಿಕವಾಗಿ ಬಾಲಗ್ರಹ ಪೀಡಿತವಾಗಿದೆ" ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net