

ತಮಿಳುನಾಡು: ಧೋನಿ ಎಂಟರ್ಟೈನ್ಮೆಂಟ್ ನಿರ್ಮಾಣ ಸಂಸ್ಥೆಯಡಿ ಹೊರಹೊಮ್ಮುತ್ತಿರುವ ಮೊದಲ ಚಿತ್ರ 'ಲೆಟ್ಸ್ ಗೆಟ್ ಮ್ಯಾರೀಡ್' ಇದೀಗ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಮಹೇಂದ್ರ ಸಿಂಗ್ ಧೋನಿ ಅವರ ಚಿತ್ರ ಇದೀಗ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಇತ್ತೀಚಿಗೆ ನಡೆದ ಪ್ರೆಸ್ ಮೀಟ್ನಲ್ಲಿ ಭಾಗಿಯಾಗಿದ್ದ ಕ್ಯಾಪ್ಟನ್ ಕೂಲ್ ಧೋನಿ ಮತ್ತು ಸಾಕ್ಷಿ ಸಿಂಗ್, ಕೆಲ ಸಮಯ ಮಾಧ್ಯಮದವರೊಟ್ಟಿಗೆ ಸಂವಾದ ನಡೆಸಿದರು. ಈ ವೇಳೆ ಸುದ್ದಿಗಾರರ ಒಂದು ಪ್ರಶ್ನೆಗೆ ಉತ್ತರಿಸಿದ ಎಂಎಸ್ಡಿ ಪತ್ನಿ, "ನಾನು ಅಲ್ಲು ಅರ್ಜುನ್ ಅವರ ದೊಡ್ಡ ಅಭಿಮಾನಿ. ಯೂಟ್ಯೂಬ್ನಲ್ಲಿ ಅವರ ಎಲ್ಲಾ ಚಲನಚಿತ್ರಗಳನ್ನು ವೀಕ್ಷಿಸಿದ್ದೇನೆ" ಎಂದು ಸಂತಸದಿಂದ ಹೇಳಿದರು. ಸಾಕ್ಷಿ ಅವರ ಈ ಮಾತನ್ನು ಕೇಳಿದ ಅಲ್ಲು ಅರ್ಜುನ್ ಅಭಿಮಾನಿ ಬಳಗ ಇದೀಗ ಭಾರೀ ಖುಷಿಯನ್ನು ವ್ಯಕ್ತಪಡಿಸಿದೆ.
ಎಂ.ಎಸ್. ಧೋನಿ ಅವರ ಚೊಚ್ಚಲ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಲೆಟ್ಸ್ ಗೆಟ್ ಮ್ಯಾರೀಡ್' ಚಿತ್ರವನ್ನು ರಮೇಶ್ ತಮಿಳಮಣಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ನದಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡ ಈಗಾಗಲೇ ನಿಗದಿಪಡಿಸಿರುವಂತೆ ಸಿನಿಮಾ ಜುಲೈ 28, 2023 ರಂದು ಬಿಡುಗಡೆಯಾಗಲಿದೆ,(ಏಜೆನ್ಸೀಸ್).