

ಹೈದರಾಬಾದ್: ಖಾರ ಬೂಂದಿ ತುಂಬಿದ ಪ್ಯಾಕೆಟ್ನಲ್ಲಿ ಕದ್ದು ಸಾಗಿಸುತ್ತಿದ್ದ 54 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಅನ್ನು ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿಮೇರೆಗೆ ವಿಮಾನ ನಂಬರ್ ಇಕೆ-525 ಮೂಲಕ ದುಬೈಗೆ ಸಾಗಿಸುತ್ತಿದ್ದ ಖಾರಾ ಬೂಂದಿ ಪ್ಯಾಕೆಟ್ ತುಂಬಿದ ಬ್ಯಾಗ್ ಅನ್ನು ವಶಪಡಿಸಿಕೊಂಡು ಪರಿಶೀಲಿಸಿದಾಗ ಬೂಂದಿಯೊಳಗೆ ಸೇರಿಸಿದ್ದ 54 ಲಕ್ಷ ರೂ. ಮೌಲ್ಯದ ಹಣವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಪ್ರತಿ ಪ್ಯಾಕೆಟ್ನಲ್ಲಿ ಹಣವನ್ನು ಕವರ್ ಮಾಡಿ ತುಂಬಲಾಗಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಬ್ಯಾಗ್ನ ಮಾಲೀಕ ಯಾರೆಂಬುದು ಇನ್ನು ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನದಲ್ಲಿ ಕಳ್ಳಸಾಗಾಣೆ ಮಾಡುವ ಪ್ರಕರಣಗಳು ಹೊಸದೇನಲ್ಲ. ಈಗಾಗಲೇ ಆಹಾರ, ಬಟ್ಟೆ, ಬ್ಯಾಗ್, ಬೆಲ್ಟ್, ಶೂ ಸೇರಿದಂತೆ ಅನೇಕ ಪದಾರ್ಥಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಕೆಲವೊಮ್ಮೆ ವಿಶೇಷ ಪ್ರಾಣಿಗಳನ್ನು ಬಚ್ಚಿಟ್ಟು ಸಾಗಿಸುವಾಗ ಕಸ್ಟಮ್ಸ್ ಅಧಿಕಾರಿಗಳ ಕೈಯಲ್ಲಿ ಸಿಲುಕಿಕೊಳ್ಳುವ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ. (ಏಜೆನ್ಸೀಸ್)