ಚಿತ್ರರಂಗಕ್ಕೀಗ ಡೇಟ್ ಸಮಸ್ಯೆ: ಬಿಡುಗಡೆಗೂ ಕರೊನಾತಂಕ, ಓಲ್ಡ್​ಮಾಂಕ್​ಗೆ ಈಗ 3 ದಿನಾಂಕ!

Old Monk
Published on

ಬೆಂಗಳೂರು: ಮಗು ಯಾವಾಗ ಹುಟ್ಟುತ್ತದೆ ಎಂದು ವೈದ್ಯರು ಬಹುತೇಕ ಕರಾರುವಾಕ್​ ಆಗಿ ಹೇಳಿಬಿಡಬಲ್ಲರು. ಹಾಗೆಯೇ ಒಂದು ಸಿನಿಮಾ ಅದರ ನಿರ್ಮಾಪಕರು-ನಿರ್ದೇಶಕರು ಮತ್ತು ಚಿತ್ರತಂಡಕ್ಕೆ ಒಂದು ಮಗುವಿನಂತೆಯೇ. ಆದರೆ ಅವರ ಆ ಸಿನಿಮಾ ಯಾವಾಗ ಬಿಡುಗಡೆ ಮಾಡುತ್ತೇವೆ ಎಂದು ಅವರಿಗೆ ಹೇಳುವುದೇ ಕಷ್ಟ ಎಂಬಂಥ ಪರಿಸ್ಥಿತಿ ಸೃಷ್ಟಿಯಾಗಿದೆ.

ಹೌದು.. ಬರೀ ಡೋಲೋ ಮಾತ್ರೆಯಿಂದ ಗುಣವಾಗುತ್ತದೆ ಎನ್ನಲಾಗಿರುವ ಈ ಕರೊನಾ ವ್ಯಾಪಿಸುತ್ತಿರುವ ವೇಗ, ಆವರಿಸಿರುವ ವ್ಯಾಪ್ತಿ ಡೋಲಾಯಮಾನ ಪರಿಸ್ಥಿತಿಯನ್ನು ಸೃಷ್ಟಿಸಿಬಿಟ್ಟಿದೆ. ಪರಿಣಾಮವಾಗಿ ಚಿತ್ರರಂಗಕ್ಕೂ ದೊಡ್ಡ ಹೊಡೆತ ಕೊಟ್ಟುಬಿಟ್ಟಿದೆ. ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾಗುವಂಥ ಸಾಹಸ ಬಹುತೇಕ ಯಾರೂ ಮಾಡುತ್ತಿಲ್ಲವಾದರೂ ಈಗಾಗಲೇ ನಿರ್ಮಿಸಿರುವ ಸಿನಿಮಾ ಬಿಡುಗಡೆ ಮಾಡುವುದು ಕೂಡ ಸಾಹಸ ಎಂಬಂತಾಗಿದೆ. ಚಿತ್ರರಂಗಕ್ಕೀಗ ಡೇಟ್ ಸಮಸ್ಯೆ ಕಾಡುತ್ತಿದೆ.

ಇನ್ನೇನು ಕರೊನಾ ತಗ್ಗಿತು ಎಂದು ಚಿತ್ರ ಬಿಡುಗಡೆಯ ದಿನಾಂಕ ಘೋಷಿಸಿದವರಲ್ಲಿ ಹಲವರು ಬಿಡುಗಡೆಯನ್ನು ಮುಂದೂಡಿದ್ದಾರೆ. ಈ ಮಧ್ಯೆ ನೈಟ್​ ಕರ್ಫ್ಯೂ ಯಾವಾಗ ತೆರವುಗೊಳ್ಳುತ್ತದೆ, ಮತ್ತೆ ಶೇ. 100 ಆಸನ ಭರ್ತಿ ಮೇರೆಗೆ ಪ್ರದರ್ಶನಕ್ಕೆ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆ ಒಂದೆಡೆಯಾದರೆ, ಮತ್ತೆ ಕರೊನಾ ಹೆಚ್ಚಾಗಿ ಎಲ್ಲಿ ವಾರಾಂತ್ಯ ಕರ್ಫ್ಯೂ ಪುನಃ ಜಾರಿಯಾಗುತ್ತದೋ, ಲಾಕ್​ಡೌನ್​ ಹೇರಲಾಗುತ್ತದೋ ಎಂಬ ಆತಂಕ ಕೂಡ ಕಾಡುತ್ತಿದೆ.

ಹೀಗಾಗಿ ಚಿತ್ರರಂಗದವರು ಇದೀಗ ಹೊಸದೊಂದು ದಾರಿ ಕಂಡುಕೊಂಡಿದ್ದಾರೆ. ಸಿನಿಮಾ ಒಂದೇ ಆದರೂ ಬಿಡುಗಡೆಯ ದಿನಾಂಕ ಮಾತ್ರ ಒಂದೇ ಆಗಿಲ್ಲ. ಒಂದಲ್ಲ ಒಂದು ದಿನ ಪರಿಸ್ಥಿತಿ ತಿಳಿಯಾಗಬಹುದು ಎಂಬ ಭರವಸೆಯ ಮೇರೆಗೆ ಒಂದರ ಜತೆಗೆ ಇನ್ನೊಂದು ಬಿಡುಗಡೆ ದಿನಾಂಕವನ್ನೂ ನಿಗದಿ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಒಮ್ಮೆ ಬಿಡುಗಡೆಯನ್ನು ಮುಂದೂಡಿರುವ 'ಆರ್​ಆರ್​ಆರ್​' ಸಿನಿಮಾ ತಂಡ ಮೊನ್ನೆಮೊನ್ನೆಯಷ್ಟೇ ಬಿಡುಗಡೆಗೆ ಎರಡು ದಿನಾಂಕಗಳನ್ನು ಘೋಷಿಸಿಕೊಂಡಿದೆ.

ಇದೀಗ ಕನ್ನಡದ 'ಓಲ್ಡ್​ ಮಾಂಕ್'​ ಸಿನಿಮಾ ತಂಡ ಕೂಡ ಅದೇ ದಾರಿ ಹಿಡಿದಿದ್ದರೂ ಮತ್ತೊಂದು ಹೆಜ್ಜೆಯನ್ನು ಮುಂದಿರಿಸಿದೆ. ಅಂದರೆ ಈ ಚಿತ್ರಕ್ಕೀಗ ಬಿಡುಗಡೆ ದಿನಾಂಕ ಒಂದಲ್ಲ, ಎರಡೂ ಅಲ್ಲ, ಮೂರು. ಹೌದು.. ಕರೊನಾ ಕಡಿಮೆಯಾದ್ರೆ ಫೆ. 11ಕ್ಕೆ, 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟರೆ ಫೆ. 24ಕ್ಕೆ, 'ಆರ್​ಆರ್​ಆರ್'​ ಚಿತ್ರದ ಬಿಡುಗಡೆ ಮುಂದಕ್ಕೆ ಹೋದರೆ ಏಪ್ರಿಲ್ 24ಕ್ಕೆ ನಮ್ಮ ಸಿನಿಮಾ 'ಓಲ್ಡ್​ಮಾಂಕ್' ಬಿಡುಗಡೆ ಆಗಲಿದೆ ಎಂದು ಸಿನಿತಂಡ ಹೇಳಿಕೊಂಡಿದೆ. ಇನ್ನು ಮೇಲೆ ಹೇಳಿದ ಯಾವ ದಿನಾಂಕದಲ್ಲೂ ಬಿಡುಗಡೆ ಸಾಧ್ಯವಾಗದಿದ್ದರೆ ಮೇ ತಿಂಗಳಲ್ಲಿ ಖಂಡಿತ ಚಿತ್ರ ಬಿಡುಗಡೆ ಆಗಲಿದೆ ಎಂದೂ ನಟ-ನಿರ್ದೇಶಕ ಶ್ರೀನಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net