ಹೆಣ್ಣೂರಲ್ಲೇ ಹೆಣ್ಣಿಗೆ ಅನ್ಯಾಯ!; ದೂರು ನೀಡಲು ಹೋದರೆ ಲಂಚ ಕೇಳಿದ, ಮಂಚಕ್ಕೂ ಕರೆದ ಪೊಲೀಸ್ ಇನ್​ಸ್ಪೆಕ್ಟರ್​...

Woman
ಲೀಸ್​ಗೆ ಇದ್ದವರಿಂದ ಹಲ್ಲೆಗೊಳಗಾಗಿ ಗಾಯಗೊಂಡಿರುವ ಮನೆ ಮಾಲಕಿ
Published on

ಬೆಂಗಳೂರು: ಹೆಣ್ಣೂರಲ್ಲೇ ಹೆಣ್ಣಿಗೆ ಅನ್ಯಾಯ ಎಂಬಂಥ ಪ್ರಕರಣವೊಂದು ಪೊಲೀಸ್ ಕಮಿಷನರ್​ ಅವರವರೆಗೂ ತಲುಪಿದೆ. ದೂರು ನೀಡಲು ಹೋದಾಗ ಲಂಚ ಕೇಳಿದ್ದಲ್ಲದೆ, ಮಂಚಕ್ಕೂ ಕರೆದ ಎಂದು ಮಹಿಳೆಯೊಬ್ಬರು ಪೊಲೀಸ್​ ಕಮಿಷನರ್ ಬಳಿ ಅಹವಾಲು ಹೇಳಿಕೊಂಡಿದ್ದಾರೆ.

ಬೆಂಗಳೂರಿನ ಹೆಣ್ಣೂರು ಪೊಲೀಸ್ ಇನ್​ಸ್ಪೆಕ್ಟರ್​ ವಸಂತಕುಮಾರ್ ವಿರುದ್ಧ ಹೆಣ್ಣೂರಿನ ಶಕ್ತಿನಗರ ನಿವಾಸಿಯಾಗಿರುವ ಸಂತ್ರಸ್ತೆ ಪೊಲೀಸ್ ಕಮಿಷನರ್ ಕಮಲ್ ಪಂತ್​ಗೆ ದೂರು ನೀಡಿದ್ದಾರೆ. ತನ್ನ ಮೇಲೆ ಹಲ್ಲೆಯಾಗಿದೆ ಎಂದು ದೂರು ನೀಡಲು ಹೋದರೆ ಇನ್​ಸ್ಪೆಕ್ಟರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆಕೆ ಅಲವತ್ತುಕೊಂಡಿದ್ದಾರೆ.

ದೂರು ನೀಡಿದ ಮಹಿಳೆ ಶಕ್ತಿನಗರದಲ್ಲಿ ಸ್ವಂತ ಮನೆ ಹೊಂದಿದ್ದು, ಕೆಲವು ವರ್ಷಗಳ ಹಿಂದೆ ವರಲಕ್ಷ್ಮಿ ಎಂಬವರಿಗೆ ಅದನ್ನು ಲೀಸ್​ಗೆ ನೀಡಿದ್ದರು. ಲೀಸ್ ಮೊತ್ತವಾಗಿ 7 ಲಕ್ಷ ರೂಪಾಯಿ ಪಡೆದಿದ್ದರು. ಆದರೆ ಆ ಮನೆಯಲ್ಲಿದ್ದವರು ಒಂದು ವರ್ಷದಿಂದ ನೀರಿನ ಬಿಲ್ ಪಾವತಿಸಿರಲಿಲ್ಲ. ಅದನ್ನು ಕೇಳಲೆಂದು ಮನೆ ಬಳಿಗೆ ಹೋಗಿದ್ದಾಗ, ವರಲಕ್ಷ್ಮಿ ಮತ್ತು ಆಕೆಯ ಕಡೆಯವರು ಚಾಕುವಿನಿಂದ ಹಲ್ಲೆಗೈದು, ಕೈ ತಿರುಚಿ ಗಾಯಗೊಳಿಸಿದ್ದಾರೆ ಎಂದು ದೂರು ನೀಡಲಾಗಿದೆ.

ಬಳಿಕ ಮನೆ ಮಾಲಕಿ ಆರೋಪಿಗಳಿಂದ ತಪ್ಪಿಸಿಕೊಂಡು ಕೆ.ಸಿ. ಜನರಲ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು, ನಂತರ ದೂರು ನೀಡುವ ಸಲುವಾಗಿ ಹೆಣ್ಣೂರು ಪೊಲೀಸ್ ಠಾಣೆಗೆ ಹೋಗಿದ್ದರು.

ಆದರೆ ಇನ್​ಸ್ಪೆಕ್ಟರ್ ವಸಂತಕುಮಾರ್ ದೂರು ದಾಖಲಿಸಿಕೊಳ್ಳಲಿಲ್ಲ. ಬದಲಿಗೆ ದೂರು ದಾಖಲಿಸಿಕೊಳ್ಳಲು 5 ಲಕ್ಷ ರೂ. ಲಂಚ ಕೊಡಬೇಕು ಮತ್ತು ನಾನು ಕರೆದಾಗೆಲ್ಲ ಮಂಚಕ್ಕೆ ಬರಬೇಕು ಎಂದು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದಾಗಿ ಆರೋಪಿಸಿರುವ ಮಹಿಳೆ, ಇನ್​ಸ್ಪೆಕ್ಟರ್ ವಿರುದ್ಧ ಅತ್ಯಾಚಾರ ಯತ್ನ ಆರೋಪ ಹೊರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net