More

    ರೈತ ಸಮುದಾಯದತ್ತ ಗಮನ

    ಕಳೆದ ಫೆಬ್ರವರಿಯಿಂದ ಆರಂಭವಾಗಿದ್ದ ಬಿರುಬಿಸಿಲಿಗೆ ಕೊನೆಗೂ ತೆರೆಬಿದ್ದಿದೆ. ವರುಣ ಕಣ್ತೆರೆದಿದ್ದಾನೆ. ನಾಲ್ಕೈದು ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಬೀಳುತ್ತಿದೆ. ಇದರಿಂದಾಗಿ, ಈವರೆಗೆ ಜನರನ್ನು ಹಿಂಡಿ ಹಿಪ್ಪೆ ಮಾಡಿದ್ದ ಹೀಟ್​ವೇವ್ ಬದಿಗೆ ಸರಿದಿದೆ. ಬಿಸಿಗಾಳಿಯ ಪ್ರಖರತೆ ತಗ್ಗಿದೆ. ಜನ ನಿಟ್ಟುಸಿರುಬಿಟ್ಟಿದ್ದಾರೆ. ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕಲಬುರಗಿ ಜಿಲ್ಲೆಯಲ್ಲಿ 41.2 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಕಂಡುಬಂದರೆ, ಕೊಪ್ಪಳದಲ್ಲಿ 40.5, ರಾಯಚೂರು ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ 40 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಉತ್ತರದ ಉಳಿದ ಜಿಲ್ಲೆಗಳಲ್ಲಿ ಉಷ್ಣಾಂಶ ಇಳಿಮುಖವಾಗಿದ್ದು, 35ರಿಂದ 39 ಡಿ.ಸೆ. ಒಳಗೆ ಇದೆ. ದಕ್ಷಿಣ ಒಳನಾಡು ಜಿಲ್ಲೆಗಳ ಉಷ್ಣಾಂಶ 35 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿದೆ. ರಾಜಧಾನಿ ಬೆಂಗಳೂರಿನಲ್ಲೂ ಉಷ್ಣಾಂಶ 34 ಡಿ.ಸೆ.ಗೆ ಇಳಿದಿದೆ.

    ಇದೀಗ ರಾಜ್ಯದ ಕರಾವಳಿ ಜಿಲ್ಲೆಗಳೂ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳ ಒಟ್ಟು 20 ಜಿಲ್ಲೆಗಳಲ್ಲಿ ಮಳೆಯಾಗಿದೆ. ಹಳೇ ಮೈಸೂರು ಭಾಗದ ಎಲ್ಲ ಜಿಲ್ಲೆಗಳಲ್ಲೂ ವರ್ಷಧಾರೆಯಾಗಿದೆ. ಕೊಡಗಿನ ವಿವಿಧ ತಾಲೂಕುಗಳಲ್ಲಿ ವ್ಯಾಪಕ ಮಳೆಯಾಗಿದೆ. ಕಲಬುರಗಿ, ವಿಜಯಪುರ ಜಿಲ್ಲೆಗಳ ಕೆಲವೆಡೆ ಮಾತ್ರ ಮಳೆಯಾಗಿದೆ. ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಹಲವೆಡೆ ಸಾಧಾರಣ ಪ್ರಮಾಣದ ವರ್ಷಧಾರೆಯಾಗಿದೆ. ಮುಂದಿನ ಮೂರು ದಿನಗಳ ಕಾಲ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ.

    ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ತುಮಕೂರು, ಚಿಕ್ಕಮಗಳೂರು, ದಕ್ಷಿಣಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ವರ್ಷಧಾರೆಯಾಗಲಿದೆ. ರಾಜ್ಯದ ಹವಾಮಾನ ಈ ರೀತಿ ದಿಢೀರನೆ ಬದಲಾಗಿರುವುದು ಈವರೆಗೆ ಬಿರುಬಿಸಿಲಿಗೆ ಬಳಲಿ ಬೆಂಡಾಗಿದ್ದ ಕೃಷಿಕ ಸಮುದಾಯಕ್ಕೆ ಮರುಜೀವ ನೀಡಿದಂತಾಗಿದೆ. ಕಳೆದ ವರ್ಷವೇ ಬರಗಾಲದಿಂದಾಗಿ ಸಾಕಷ್ಟು ಕಷ್ಟ-ನಷ್ಟಗಳನ್ನು ರೈತರು ಅನುಭವಿಸಿದ್ದಾರೆ. ಈಗ ಮುಂಗಾರಿಗೆ ಮೊದಲೇ ಮಳೆರಾಯ ಕಾಲಿಟ್ಟಿರುವುದನ್ನು ಕಂಡು ರೈತರ ಮನಸ್ಸಿನಲ್ಲಿ ತುಸು ಆಶಾಭಾವನೆ ಮೂಡಿದೆ. ಬಿತ್ತನೆಗೆ ಮುನ್ನ ಭೂಮಿ ಹದ ಮಾಡಿಕೊಳ್ಳುವಂತಹ ಪೂರ್ವಭಾವಿ ಕೆಲಸಗಳಿಗೆ ಮುಂದಡಿ ಇಟ್ಟಿದ್ದಾರೆ.

    ಈ ಸಂದರ್ಭದಲ್ಲಿ ಕೃಷಿ ಕಾರ್ಯಗಳಿಗೆ ಬೇಕಾಗುವ ಪರಿಕರ-ಉಪಕರಣಗಳನ್ನು ರೈತ ಸಮುದಾಯಕ್ಕೆ ಸಕಾಲದಲ್ಲಿ ಪೂರೈಸುವ ಕೆಲಸವನ್ನು ರಾಜ್ಯ ಸರ್ಕಾರ ನಿಭಾಯಿಸಬೇಕಾಗಿದೆ. ಇನ್ನು ಕೆಲ ದಿನಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರ ಕೃಷಿ ಸಂಬಂಧಿ ಪರಿಕರಗಳಿಗಾಗಿ ಬೇಡಿಕೆ ಹೆಚ್ಚಾಗಲಿದೆ. ಅಗತ್ಯವಿರುವ ಸಿದ್ಧತೆಯನ್ನು ಕೃಷಿ ಇಲಾಖೆ ಈಗಿನಿಂದಲೇ ಮಾಡಿಕೊಳ್ಳುವುದು ಒಳಿತು. ಎಲ್ಲಿಯೂ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಅವುಗಳ ಯಥೋಚಿತ ಪೂರೈಕೆಯತ್ತ ಗಮನಹರಿಸಬೇಕು. ಈಗ ನಮ್ಮ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡೂ ಹಂತಗಳು ಕೂಡ ಮುಕ್ತಾಯವಾಗಿರುವುದರಿಂದ ಸಚಿವರು, ಹಿರಿಯ ಅಧಿಕಾರಿಗಳು ಸಹ ಜನರ ಕುಂದುಕೊರತೆಗಳನ್ನು ಬಗೆಹರಿಸಲು ಸಮರೋಪಾದಿಯಲ್ಲಿ ಮುಂದಾಗಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts