More

    ಹಳದಿ ಲೋಹ, ಬಿಡದ ವ್ಯಾಮೋಹ

    | ಡಾ. ದೀಪಾ ಎಂ.ಬಿ, ಡಾ. ಪ್ರಭಾಕರ ಸಂಗೂರಮಠ

    ಭಾರತೀಯ ಮಹಿಳೆಯರು ತುಸು ಹೆಚ್ಚೇ ಭಾವನಾಜೀವಿಗಳು. ಅಕ್ಷಯ ತೃತೀಯಾದಂದು ಒಂದು ಮೂಗುಬೊಟ್ಟಾದರೂ ಕೊಂಡುಕೊಳ್ಳುವ ಎಂದು ಹೊರಟೇಬಿಡುತ್ತಾರೆ. ಅಕ್ಷಯ ಎಂದರೆ ವೃದ್ಧಿಸುವ ಗುಣವುಳ್ಳ, ಎಂದಿಗೂ ಮುಕ್ಕಾಗದ, ಬೆಲೆ ಕಳೆದುಕೊಳ್ಳದ ಎಂದರ್ಥ. ಹಾಗಾಗಿ ಚಿನ್ನದ ಮೇಲೆ ಆ ದಿನ ಹೂಡಿಕೆ ಮಾಡಲಾಗುತ್ತದೆ. ಚಿನ್ನದ ಹಿನ್ನೆಲೆ ನೋಡಿದರೆ 1950ರಲ್ಲಿ 10 ಗ್ರಾಂ ಚಿನ್ನಕ್ಕೆ ಕೇವಲ 99 ರೂ. ಇತ್ತು. ಈಗ 2024ರಲ್ಲಿ 62200 ರೂ.ವರೆಗೆ ಬಂದಿದೆ. ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಚಿನ್ನದ ಬೆಲೆ ಯಾವತ್ತೂ ಕಡಿಮೆ ಆಗುವುದಿಲ್ಲವಾದ್ದರಿಂದ ಅದರ ಮೇಲಿನ ಹೂಡಿಕೆ ನಿರಂತರವಾಗಿ ಹೆಚ್ಚುತ್ತಲೇ ಇದೆ.

    ಚಿನ್ನವೆಂಬ ಹಳದಿ ಲೋಹದ ಮೇಲಿನ ವ್ಯಾಮೋಹ ಇಂದು ನಿನ್ನೆಯದಲ್ಲ. ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಅನಾದಿ ಕಾಲದಿಂದಲೂ ಒಡವೆ, ನಾಣ್ಯದ ರೂಪದಲ್ಲಿ ಜನರು ಇದರ ಸಂಗ್ರಹ ಮಾಡಿರುವುದು ಕಂಡುಬರುತ್ತದೆ. ಅದು ಶ್ರೀಮಂತಿಕೆಯ ಸಂಕೇತ. ಅಲಂಕಾರಕ್ಕಾಗಿ ಆಭರಣಗಳನ್ನಾಗಿಯೂ ಧರಿಸುತ್ತಾರೆ. ಕಷ್ಟ ಕಾಲದಲ್ಲಿ ಕೈಹಿಡಿಯುವ ಆಪದ್ಬಾಂಧವ ಕೂಡ ಚಿನ್ನವೇ. ಭಾರತದಲ್ಲಿನ ಆಧುನಿಕ ಭೂಸರ್ವೆಕ್ಷಣಾ ಅನ್ವೇಷಣೆಗಳಿಂದ ತಿಳಿದುಬರುವ ಗಮನಾರ್ಹ ಅಂಶಗಳೆಂದರೆ, ಹೆಚ್ಚಿನ ರಾಜ್ಯಗಳಲ್ಲಿ ಚಿನ್ನದ ನಿಕ್ಷೇಪಗಳಿದ್ದವು. ಇದಕ್ಕೆ ಇಂಬು ಕೊಡುವಂತೆ ಹಲವು ನದಿ, ಬೆಟ್ಟಗುಡ್ಡಗಳಿಗೆ ಚಿನ್ನಕ್ಕೆ ಸಂಬಂಧಿಸಿದ ಹೆಸರನ್ನೇ ಇಡಲಾಗಿದೆ. ಉದಾಹರಣೆಗೆ, ಸೋನಾ, ಸ್ವರ್ಣ, ಪೊನ್ನು, ಹೊನ್ನು ಇತ್ಯಾದಿ ಹೆಸರುಗಳು. ಆಂಧ್ರಪ್ರದೇಶದ ಸ್ವರ್ಣಮುಖಿ ನದಿ, ಛತ್ತೀಸ್​ಗಢದ ಸೋನಾಜೋರಿ, ಬಿಹಾರದ ಸುವರ್ಣರೇಖಾ, ಕರ್ನಾಣಕದ ಸ್ವರ್ಣ, ತಮಿಳುನಾಡಿನ ಪೊನ್ನೈಯಾರ್, ಉತ್ತರಪ್ರದೇಶದ ಸೋನವಾಡಿ ಇತ್ಯಾದಿ. ಬೆಟ್ಟಗಳಿಗೂ ಇಂತಹ ಹೆಸರುಗಳುಂಟು. ಕರ್ನಾಟಕದಲ್ಲಿನ ಬಂಗಾರಗಟ್ಟಿ, ಹೊನ್ನೆಗುಡ್ಡ, ಛತ್ತೀಸ್​ಗಢದ ಸೋನಾಪಹಾರಿ ಮತ್ತು ಸೋನಾದೇಹಿ ಡೊಂಗ್ರಿ, ಮೇಘಾಲಯದ ಪಹರ್, ರಾಜಸ್ಥಾನದ ಸೊನಾರಿಯಾ, ಒಡಿಶಾದ ಸುಂದೇಹಿಪಹರ್ ಇತ್ಯಾದಿ.

    ಮಿರುಮಿರುಗುವ ಹೊಂಬಣ್ಣದ ಮತ್ತು ಕಾಲ ಕಳೆದರೂ ಬಣ್ಣ ಮಾಸದ, ತುಕ್ಕು ಹಿಡಿಯದ, ಕಿಲುಬುಗಟ್ಟದ ಗುಣವನ್ನು ಹೊಂದಿರುವ ಚಿನ್ನವು ಎಲ್ಲಾ ಲೋಹಗಳಿಗಿಂತ ಹೆಚ್ಚು ಮನ್ನಣೆ ಪಡೆದಿದೆ. ಅಂದಿನ ಕಾಲದಲ್ಲಿಯೇ ಅಲಂಕಾರಿಕ ವಸ್ತುಗಳು ಮತ್ತು ಆಭರಣಗಳ ತಯಾರಿಕೆಯಲ್ಲಿ ಅತ್ಯಂತ ವಿಶೇಷವಾಗಿ ಬಳಸಲಾಗಿದೆ. ದೇವರ ವಿಗ್ರಹ ಕಲಾಕೃತಿ ತಯಾರಿಸಲು ಕೂಡ ಬಳಸಲಾಗಿದೆ. ಆಳ ಅಧ್ಯಯನ ಕೈಗೊಂಡದ್ದರ ಫಲವಾಗಿ ಚಿನ್ನದ ತುಣುಕುಗಳನ್ನು ಹಾಳೆಗಳನ್ನಾಗಿಯೂ (ತಗಡು) ಮತ್ತು ದಾರದಂತೆ ಎಳೆಯನ್ನಾಗಿಯೂ (ತಂತಿ) ಮಾಡಬಹುದೆಂದು ಅರಿತು ಈಜಿಪ್ಟಿನಲ್ಲಿ ಮೃತದೇಹದ ಮುಖಗಳಿಗೆ ಮುಖವಾಡಗಳನ್ನು ಮಾಡಿ ಹಾಕುತ್ತಿದ್ದರು. ಈಜಿಪ್ಟಿಯನ್ನರ ಸಮಾಧಿಗಳ ಬಳಿ ದೊರಕುತ್ತಿದ್ದ ಚಿನ್ನದ ಮುಖವಾಡಗಳು, ಆಭರಣಗಳು ಅವರ ಕುಸುರಿನೈಪುಣ್ಯಕ್ಕೆ ಸಾಕ್ಷಿ. ಚಿನ್ನದ ತುಣುಕನ್ನು ಬಗ್ಗಿಸಿ ಎಳೆದು ದಾರಗಳನ್ನಾಗಿ ಮಾಡುವ ವಿಶೇಷ ಗುಣದಿಂದ ಒಂದು ಗ್ರಾಂ ಚಿನ್ನವನ್ನು ಸುಮಾರು 3 ಕಿಲೋಮೀಟರ್ ಉದ್ದದ ಎಳೆಯನ್ನಾಗಿಸಿ, ಈ ಎಳೆಗಳನ್ನು ಕಸೂತಿಕೆಲಸದಲ್ಲಿ ಮತ್ತು ನೇಯ್ಗೆಯಲ್ಲಿ ಬಳಸಬಹುದೆಂಬುದನ್ನು ತೋರಿಸಿದರು.

    ಚಿನ್ನವು ಇತರ ಲೋಹಗಳಂತೆ, ಬೇರೆ ಧಾತುಗಳೊಂದಿಗೆ ಬೆರೆತಿರದೆ, ಚೊಕ್ಕ ಬಂಗಾರದ ರೂಪದಲ್ಲಿಯೇ ಶಿಲೆಗಳಲ್ಲಿ ರೂಪುಗೊಂಡಿರುತ್ತದೆ. ಪ್ರಾಚೀನ ಕಾಲದಲ್ಲಿ ರಸಾಯನ ವಿಜ್ಞಾನ ಮತ್ತು ಲೋಹವಿಜ್ಞಾನದ ಕುರಿತು ಅಷ್ಟೇನೂ ತಿಳಿಯದಿದ್ದ ಸಮಯದಲ್ಲಿ ಕೂಡ ಚಿನ್ನವನ್ನು ಅತ್ಯಂತ ಸರಳವಾಗಿ ಸಂಸ್ಕರಿಸುವ ವಿಧಾನವನ್ನು ಕಂಡುಕೊಂಡಿದ್ದರು. ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳು ಅಭಿವೃದ್ಧಿಗೊಂಡ ನಂತರ ಬರಿಯ ಶುದ್ಧ ಚಿನ್ನದ ಅದಿರಲ್ಲದೆ ಕಡಿಮೆ ಪ್ರಮಾಣದಲ್ಲಿ ಚಿನ್ನವನ್ನು ಹೊಂದಿರುವ ಬೇರೆ ಅದಿರುಗಳನ್ನು ಸಂಸ್ಕರಿಸುವ ಮತ್ತು ಭೂಮಿಯ ಆಳದಲ್ಲಿ ಗಣಿಗಾರಿಕೆ ಮಾಡುವ ಕೆಲಸ ಶುರುವಾಯಿತು. ಭಾರತೀಯ ಮಹಿಳೆಯರಂತೂ ಮದುವೆ, ಹಬ್ಬಗಳು, ಶುಭ ಸಮಾರಂಭಗಳಿಗೆ ಚಿನ್ನದ ಒಡವೆಗಳನ್ನು ಧರಿಸುವುದು ಅತ್ಯಂತ ಶುಭ ಮತ್ತು ಶ್ರೀಮಂತಿಕೆಯ ಸಂಕೇತವೆಂದೇ ಭಾವಿಸುತ್ತಾರೆ. ಜತೆಗೆ ಚಿನ್ನವು ದೇಶದ ಆರ್ಥಿಕತೆಯ ಜೀವಾಳ ಎನ್ನಬಹುದು.

    ಭಾರಿ ಬೇಡಿಕೆ, ಕಡಿಮೆ ಉತ್ಪಾದನೆ

    ಭಾರತದಲ್ಲಿ ಚಿನ್ನದ ಬೇಡಿಕೆ 1200 ಟನ್​ಗಳಷ್ಟಿದೆ. ಆದರೆ ಚಿನ್ನದ ಉತ್ಪಾದನೆ 1.7 ಟನ್ ಮಾತ್ರ ಇದೆ. ಹಾಗಾಗಿ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಹೆಚ್ಚಾಗುತ್ತಿದೆ. ಆದರೂ ಚಿನ್ನ ಕೊಳ್ಳುವ ಮೋಹ ಕಡಿಮೆ ಅಗಿಲ್ಲ.

    ಪೌರಾಣಿಕ ಕಥೆಗಳು…

    ಚಿನ್ನವೆಂದರೆ ಅಮರತೆಯ ಸಂಕೇತ ಎನ್ನುವಷ್ಟರ ಮಟ್ಟಿಗೆ ಪೌರಾಣಿಕ ಕಥೆಗಳಲ್ಲಿ ಸಹ ಉಲ್ಲೇಖಗಳಿವೆ. ಮಿದಾಸ ಎನ್ನುವ ರಾಜ ಚಿನ್ನದ ಮೇಲಿನ ವ್ಯಾಮೋಹದಿಂದ ತಾನು ಮುಟ್ಟಿದ್ದೆಲ್ಲ ಚಿನ್ನವಾಗಬೇಕು ಎನ್ನುವ ವರವನ್ನು ಪಡೆದ. ತನ್ನ ಮಗಳನ್ನು ಮುಟ್ಟಿದಾಗ ಅವಳು ಚಿನ್ನದ ಬೊಂಬೆಯಾಗಿ, ಅವನು ಪಡೆದ ವರವೇ ಶಾಪವಾಯಿತು. ಎಲ್​ಡೊರಾಡೋ ಎಂಬ ಆಡಳಿತಗಾರ ಹಬ್ಬಹರಿದಿನಗಳಲ್ಲಿ ಚಿನ್ನದ ಪುಡಿಯನ್ನು ತನ್ನ ದೇಹದ ತುಂಬ ಮೆತ್ತಿಸಿಕೊಳ್ಳುತ್ತಿದ್ದ, ನಂತರ ಸರೋವರದಲ್ಲಿ ಮಿಂದೇಳುತ್ತಿದ್ದ, ಇದು ಅನೇಕ ದೇಶಗಳನ್ನು ಗೆಲ್ಲಲು, ವಿಜಯಮಾಲೆ ಧರಿಸಲು ಶುಭಸಂಕೇತವೆಂದು ನಂಬಿದ್ದ. ಹಾಗೆಯೇ ಇದರಿಂದ ಹೆಚ್ಚು ಹೆಚ್ಚು ರಾಜ್ಯಗಳನ್ನು ಯುದ್ದದಲ್ಲಿ ಗೆಲ್ಲುತ್ತಿದ್ದ!

    ಚಿನ್ನದ ನಾಡು

    ಭಾರತದಲ್ಲಿನ ಚಿನ್ನದ ನಿಕ್ಷೇಪದ ವಿಷಯಕ್ಕೆ ಬಂದರೆ ಕೋಲಾರದ ಕೆಜಿಎಫ್, ರಾಯಚೂರಿನ ಹಟ್ಟಿ ಚಿನ್ನದ ಗಣಿಯ ಹೆಸರು ಮುಂಚೂಣಿಯಲ್ಲಿರುತ್ತವೆ. 120 ವರ್ಷಗಳ ಚಿನ್ನದ ಗಣಿಗಾರಿಕೆ ಇತಿಹಾಸವನ್ನು ಹೊಂದಿದ್ದ ಕೋಲಾರದ ಚಿನ್ನದ ಗಣಿಯು ಸುಮಾರು 800 ಟನ್ ಗಳಷ್ಟು ಚಿನ್ನವನ್ನು ಉತ್ಪಾದಿಸಿದ ಹೆಗ್ಗಳಿಕೆ ಹೊಂದಿದೆ. ಕಾರಣಾಂತರಗಳಿಂದ 2001ರಿಂದ ಅದು ಸ್ಥಗಿತಗೊಂಡಿದೆ. ಹಟ್ಟಿ ಚಿನ್ನದ ಗಣಿ ಕಾರ್ಯೋನ್ಮುಖವಾಗಿದ್ದು ವಾರ್ಷಿಕ ಸರಾಸರಿ 1.7 ಟನ್ ಚಿನ್ನವನ್ನು ಉತ್ಪಾದಿಸುತ್ತದೆ.

    ಶುದ್ಧತೆಯ ಮಾನದಂಡ

    ಚಿನ್ನದ ಶುದ್ಧತೆಯನ್ನು ಕ್ಯಾರಟ್ ಮಾನದಲ್ಲಿ ಅಳೆಯಲಾಗುತ್ತದೆ. ಬೇರೆ ಯಾವುದೇ ಲೋಹಗಳ ಮಿಶ್ರಣವಿಲ್ಲದ ಶುದ್ಧ ಚಿನ್ನವನ್ನು 24 ಕ್ಯಾರಟ್ ಎಂದು ಕರೆಯಲಾಗುತ್ತದೆ. ಇತರ ಲೋಹಗಳು ಬೆರೆತಿದ್ದರೆ ಅಂಥ ಚಿನ್ನದ ಸ್ಯೂಚ್ಯಂಕ ಕಡಿಮೆ ಆಗುತ್ತದೆ. ಆಭರಣಗಳ ತಯಾರಿಕೆಯಲ್ಲಿ 22 ಕ್ಯಾರಟ್ ಚಿನ್ನ ಬಳಸಿದ್ದರೆ 22 ಭಾಗ ಚಿನ್ನದ್ದು, ಇನ್ನೆರಡು ಭಾಗ ಬೇರೆ ಲೋಹದ್ದು. ಶುದ್ಧ ಚಿನ್ನವನ್ನು 1000 ಪಟ್ಟು ಶುದ್ಧ ಎಂದು ಗುರುತಿಸಿದರೆ, ಆಭರಣಗಳಿಗೆ ಬಳಸುವ ಚಿನ್ನ 916.7ರಷ್ಟು ಶುದ್ಧವಾದದ್ದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts