ಹವಳ ಸಂರಕ್ಷಿಸಲು ಬಂದವರು ದ್ವೀಪದಲ್ಲಿಯೇ ಬಂಧಿಗಳಾದರು...

Island2
Published on

ಮಯನ್ಮಾರ್​: ಗ್ರಾಮೀಣ ಭಾಗದಲ್ಲಿ ತಮ್ಮೂರುಗಳಿಗೆ ತೆರಳುವ ಜನರಿಗೆ ಕೊನೆಯ ಬಸ್​ ಮಿಸ್​ ಆದರೆ ಹರೋಹರ. ಅಷ್ಟಕ್ಕೂ ಇರೋದು ಒಂದೋ, ಎರಡೋ ಬಸ್​ ಎನ್ನಿ..! ಇನ್ನು ಬೆಳಗಾಗೋವರೆಗೆ ಊರು ಮುಟ್ಟಲು ಬೇರೆ ಸಾರಿಗೆ ವ್ಯವಸ್ಥೆ ಇರೋದಿಲ್ಲ. ಒಂದು ದಿನ ಅಥವಾ ರಾತ್ರಿಯಾದರೆ ಹೇಗೋ ಕಳೆಯಬಹುದು... ತಿಂಗಳುಗಟ್ಟಲೇ ಕಳೆಯುವಂತಾದರೆ....

ಮಯನ್ಮಾರ್​ನ ಕ್ಯೂನ್​ ಪಿಲಾ ಎಂಬ ದ್ವೀಪದಲ್ಲಿ ಕಳೆದ ಎರಡು ತಿಂಗಳಿನಿಂದ ಕೊನೆಯ ದೋಣಿಗಾಗಿ ಕಾಯುತ್ತಲೇ ಇದೆ ಐವರ ತಂಡ..!

ಬ್ರಿಟಿಷ್​ ಮಹಿಳೆಯೊಬ್ಬಳು ಸೇರಿ ಐವರು ದ್ವೀಪದಲ್ಲಿರುವ ಹವಳ ದ್ವೀಪಗಳ ಅಧ್ಯಯನ ಹಾಗೂ ಸಂರಕ್ಷಣೆ ಕಾರ್ಯಕ್ಕಾಗಿ ಮಾರ್ಚ್​ 19ರಂದು ಆಗಮಿಸಿದ್ದರು. ಅಲ್ಲಿ ಕೆಲದಿನಗಳವರೆಗೆ ಉಳಿಯುವ ಉದ್ದೇಶದಿಂದಲೇ ಬಂದಿದ್ದರಿಂದ ಊಟ ಹಾಗೂ ವಸತಿಗಾಗಿ ವ್ಯವಸ್ಥೆ ಮಾಡಿಕೊಂಡಿತ್ತು. ಆದರೆ, ಮೇ 5 ರಂದು ಅವರನ್ನು ಕರೆದೊಯ್ಯಬೇಕಿದ್ದ ದೋಣಿ ದ್ವೀಪಕ್ಕೆ ಬರಲೇಯಿಲ್ಲ. ಏಕೆಂದರೆ, ಕರೊನಾ ವೈರಸ್​ ಸಂಕಷ್ಟದಿಂದಾಗಿ ದೋಣಿ ಸಂಚಾರವೇ ಬಂದ್​ ಆಗಿದೆ. ಮುಂದೇನೂ ಎಂಬುದು ತಿಳಿಯದೇ ಈ ತಂಡವೂ ಕಂಗಾಲಾಗಿದೆ.

ದ್ವೀಪದಲ್ಲಿಯೇ ಸಿಗುತ್ತಿರುವ ಹಲಸು ಹಾಗೂ ಗಡ್ಡೆ-ಗೆಣಸುಗಳನ್ನು ತಿಂದುಕೊಂಡು ಈ ತಂಡ ಕಾಲ ಕಳೆಯುತ್ತಿದೆ. ಇನ್ನೆಷ್ಟು ದಿನ ಇಲ್ಲಿ ಕಾಲ ಕಳೆಯಬೇಕು ಎಂಬ ಅನಿಶ್ಚಿತತೆ ಅವರನ್ನು ಇನ್ನಷ್ಟು ಹತಾಶರನ್ನಾಗಿಸಿದೆ.

ಇದಲ್ಲದೇ, ವಿಮಾನ ಟಿಕೆಟ್​ ಇಲ್ಲದೇ ದ್ವೀಪದಿಂದ ಕರೆದೊಯ್ಯಲಾಗದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಟಿಕೆಟ್​ ಖರೀದಿಸಬೇಕೆಂದರೆ ಆರು ತಾಸು ದೋಣಿಯಲ್ಲಿ ಪ್ರಯಾಣಿಸಬೇಕಿದೆ. ಜತೆಗೆ, ವಿದೇಶಗಳಿಗೆ ವಿಮಾನ ಸಂಚಾರವಿನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಪರಿಹಾರ ವಿಮಾನಗಳು ಬಂದು ಹೋಗುವುದು ಗೊತ್ತಾಗುತ್ತಿಲ್ಲ ಎಂಬುದು ನಟಾಲಿ ಪೂಲೆ ಅಳಲು ತೋಡಿಕೊಂಡಿದ್ದಾಳೆ.

ಕೆಲ ದಿನಗಳ ಮಟ್ಟಿಗೆ ದ್ವೀಪದಲ್ಲಿ ಇರಬಹುದಾದರೂ ಹವಾಮಾನ ಬಿಗಡಾಯಿಸಿದರೆ, ಇಲ್ಲಿಮದ ಹೊರ ಹೋಗುವುದು ಕಷ್ಟಸಾಧ್ಯವಾಗಲಿದೆ ಎಂಬುದು ಅಲ್ಲಿನವರು ಭೀತಿ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net