ಅತ್ತು ಕರೆದು ಪಡೆದ ಕರೊನಾ ಹಣ ಸೇನೆಗೆ ಬಳಸುತ್ತಿರುವ ಪಾಕಿಸ್ತಾನ

Imran khan
Published on

ನವದೆಹಲಿ: ಕರೊನಾ ಸಂಕಷ್ಟಕ್ಕೆ ಇನ್ನಿಲ್ಲದಂತೆ ತತ್ತರಿಸಿದೆ ಪಾಕಿಸ್ತಾನ ಮೊದಲೇ ಆರ್ಥಿಕ ವ್ಯವಸ್ಥೆ ಹದಗೆಟ್ಟು ಪಾಕಿಸ್ತಾನ ಕಂಗೆಟ್ಟಿತ್ತು. ಅದರಲ್ಲೀಗ ಕರೊನಾ ಹೊಡೆತಕ್ಕೆ ಮೇಲೇಳದಂತಾಗಿದೆ.

ದೇಶದಲ್ಲಿನ ಕರೊನಾ ಸಂಕಷ್ಟವನ್ನು ನಿಗ್ರಹಿಸಲು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (ಐಎಂಎಫ್​) ಅತ್ತು ಕರೆದು ನೆರವು ಪಡೆದಿತ್ತು. ಕಳೆದ ತಿಂಗಳು 1.4 ಬಿಲಿಯನ್​ ಡಾಲರ್​ ( ಅಂದಾಜು 2.24 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿ) ನೆರವು ಐಎಂಎಫ್​ ಸಮ್ಮತಿಸಿತ್ತು.

ಐಎಂಎಫ್​ ಮಂಡಳಿಯಿಲ್ಲಿದ್ದ ಭಾರತ ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಪಾಕಿಸ್ತಾನ ಈ ಹಣವನ್ನು ಬೇರೆ ಉದ್ದೇಶಗಳಿಗಾಗಿ ಬಳಸದಂತೆ ನಿಗಾವಹಿಸಬೇಕೆಂದು ಒತ್ತಾಯಿಸಿತ್ತು. ಹೀಗಾಗಿ ಐಎಂಎಫ್​ ಕೂಡ ಕರೊನಾ ಹೋರಾಟಕ್ಕೆ ನೀಡಿದ ಹಣವನ್ನು ಇನ್ಯಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ. ಸಾಲ ತೀರಿಸಲು ಅಥವಾ ಸೇನೆಗೆ ಉಪಯೋಗಿಸದಂತೆ ನಿರ್ದೇಶಿಸಿತ್ತು. ಆದರೆ, ಯಾವುದರ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತೋ ಈಗ ಅದನ್ನೇ ಪಾಕಿಸ್ತಾನ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಪ್ರಸ್ತುತ ಸೇನೆಯ ಬಜೆಟ್​ ಮೊತ್ತವನ್ನು ಶೇ.20ರಷ್ಟು ಹೆಚ್ಚಿಸಲು ಪಾಕ್​ ಸರ್ಕಾರ ಮುಂದಾಗಿದೆ. ಅದರಲ್ಲೂ ಮುಖ್ಯವಾಗಿ ಪಾಕ್​ ಯೋಧರ ಸಂಬಳವನ್ನು ಹೆಚ್ಚಿಸುವ ಸುತ್ತೋಲೆ ಹೊರಡಿಸಿದೆ.

ಯೋಧರ ಸಂಬಳ ಹೆಚ್ಚಿಸಲೇಬೇಕೆಂದು ಪಾಕ್​ ಸೇನೆ ಪಟ್ಟು ಹಿಡಿದಿತ್ತು. ಪಾಕ್​ ರೂಪಾಯಿಯ ಅಪಮೌಲ್ಯ ಹಾಗೂ ಹೆಚ್ಚುತ್ತಿರುವ ಹಣದುಬ್ಬರ ಕಾರಣದಿಂದಾಗಿ ಯೋಧರ ನೈತಿಕ ಸ್ಥೈರ್ಯವೇ ಕುಸಿದಿದೆ. ಈ ಕಾರಣದಿಂದಾಗಿ ಸಂಬಳ ಹೆಚ್ಚಿಸಬೇಕೆಂದು ತಿಳಿಸಿತ್ತು.

ಇದೀಗ ಕರೊನಾ ವಿರುದ್ಧದ ಹೋರಾಟ ಹೆಸರಲ್ಲಿ ಪಡೆದಿರುವ ನೆರವನ್ನು ಇದಕ್ಕಾಗಿ ಖರ್ಚು ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಅಲ್ಲಿಗೆ ಭಾರತ ವ್ಯಕ್ತಪಡಿಸಿದ್ದ ಆತಂಕ ನಿಜವಾದಂತಾಗಿದೆ. ಇದರ ವಿರುದ್ಧ ಐಎಂಎಫ್​ ಯಾವ ಕ್ರಮವನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net