ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಮೃತ್ಯು; ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಎಫ್‌ಐಆರ್‌ ದಾಖಲು

metro
Published on

ಬೆಂಗಳೂರು: ನಮ್ಮ ಮೆಟ್ರೋ ರೈಲಿನೊಳಗೆ ಅನಾರೋಗ್ಯದಿಂದ ವೃದ್ಧರೊಬ್ಬರು ಕುಸಿದು ಬಿದ್ದು ಕೆಲವು ಗಂಟೆಗಳ ನಂತರ ಸಾವನ್ನಪ್ಪಿದ ಘಟನೆ ನಡೆದಿದೆ. ಸಾವಿಗೆ ಕಾರಣವಾದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಪೊಲೀಸರು ಪ್ರಕರಣ ದಾಖಲಾಗಿದೆ.

ಜುಲೈ 20ರಂದು ಮೆಟ್ರೋ ರೈಲಿನಲ್ಲಿ 67 ವರ್ಷದ ವ್ಯಕ್ತಿ ಕುಸಿದು ಬಿದ್ದು, ಆಸ್ಪತ್ರೆಗೆ ತಲುಪಿದ ನಂತರ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿತ್ತು. ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್‌) ಸಿಬ್ಬಂದಿ ಸಕಾಲದಲ್ಲಿ ವೈದ್ಯಕೀಯ ನೆರವು ನೀಡಲು ವಿಫಲರಾದ ಕಾರಣ ತಂದೆ ತಿಮ್ಮೇಗೌಡ (67) ಮೃತಪಟ್ಟಿದ್ದಾರೆ ಎಂದು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪುತ್ರ ಇನ್ಸ್ಪೆಕ್ಟರ್ ಮುತ್ತುರಾಜ್ ದೂರು ಸಲ್ಲಿಸಿದ್ದಾರೆ.

Namma Metro

ನಡೆದಿದ್ದೇನು?: ತಿಮ್ಮೇಗೌಡ ಅವರು ಜುಲೈ 20 ರಂದು ರಾತ್ರಿ 9 ಗಂಟೆ ಸುಮಾರಿಗೆ ಕೆಂಗೇರಿಗೆ ತೆರಳಲು ಬೈಯಪ್ಪನಹಳ್ಳಿಯಲ್ಲಿ ಮೆಟ್ರೋ ಹತ್ತಿದ್ದರು. ಇದ್ದಕ್ಕಿದ್ದ ಹಾಗೇ ಏದೆ ನೋವು ಕಾಣಿಸಿಕೊಂಡು ತಿಮ್ಮೇಗೌಡ ಅವರು ಕುಸಿದು ಬಿದ್ದಿದ್ದಾರೆ. ಮೆಟ್ರೋ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ, ಸಹಪ್ರಯಾಣಿಕರು ಮಾರ್ಗದ ಮುಂದಿನ ನಿಲ್ದಾಣವಾದ ಎಂಜಿ ರಸ್ತೆ ನಿಲ್ದಾಣದಲ್ಲಿ ತಿಮ್ಮೇಗೌಡ ಅವರನ್ನು ಇಳಿಸಲು ನಿರ್ಧರಿಸಿದರು.

ತಿಮ್ಮೇಗೌಡ ಅವರನ್ನು ಸುಮಾರು 15-20 ನಿಮಿಷಗಳ ಕಾಲ ಯಾವುದೇ ಸಹಾಯವಿಲ್ಲದೆ ಫ್ಲಾಟ್ ಫಾರ್ಮ್ ನಲ್ಲಿ ಮಲಗಿಸಲಾಗಿತ್ತು. ಆದರೆ ಸೆಕ್ಯುರಿಟಿಗಳು ಕೂಡ ಸಹಾಯಕ್ಕೆ ಬಾರದೆ ನಿರ್ಲಕ್ಷ್ಯ ವಹಿಸಿದ್ದರು. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ತಂದೆ ಮೃತಪಟ್ಟಿದ್ದಾರೆ ಎಂದು ಪುತ್ರ ಇನ್ಸ್ಪೆಕ್ಟರ್ ಮುತ್ತುರಾಜ್ ಆರೋಪಿಸಿದ್ದಾರೆ.

ಈ ಘಟನೆಯ ಬಗ್ಗೆ ಮೆಟ್ರೋ ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಬೇಕಾಗಿದೆ. ಬೆಂಗಳೂರು ಮೆಟ್ರೋ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್ 304ಎ (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿರುವ ಮೆಟ್ರೋದಲ್ಲಿ ಸಹಾಯಕ್ಕೆ ಯಾರು ಇಲ್ಲಾ. ಅರೋಗ್ಯದಲ್ಲಿ ಏರುಪೇರಾದ್ರೆ ಆಸ್ಪತ್ರೆಗೆ ಸಾಗಿಸಲು ಯಾರು ಇಲ್ಲಾ. ಒಂದು ಆಂಬುಲೆನ್ಸ್ ಸಹ ಇಲ್ಲಾ ಎನ್ನವ ಆರೋಪ ಕೇಳಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net