

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಎಂ. ಮಹೇಶ್ ಬಾಬು ನಿರ್ದೇಶಿಸುತ್ತಿರುವ ಅನಾಥ ಮಕ್ಕಳ ಕುರಿತ ಕಥೆ ಹೊಂದಿರುವ ಸಿನಿಮಾ ‘ಸುವ್ವಾಲಿ’. ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಇತ್ತೀಚೆಗಷ್ಟೆ ಅನ್ನಪೂಣೇಶ್ವರಿ ನಗರದ ಶ್ರೀ ವಿನಾಯಕ ವೆಂಕಟೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿತು. ವಿಶೇಷ ಅಂದರೆ ಮಕ್ಕಳೇ ಚಿತ್ರಕ್ಕೆ ಮೊದಲ ಕ್ಲ್ಯಾಪ್ ಮಾಡಿದರು. ‘‘ಸುವ್ವಾಲಿ’ ಅನಾಥ ಮಕ್ಕಳ ಸುತ್ತ ಸಾಗುವ ಕಥೆ.
ಅನಾಥ ಮಕ್ಕಳು ಸಮಾಜದಲ್ಲಿ ಏನಾಗುತ್ತಾರೆ? ಅವರ ಭವಿಷ್ಯ ಹೇಗೆಲ್ಲಾ ತಿರುವು ಪಡೆಯುತ್ತದೆ? ಅಪ್ಪ-ಅಮ್ಮ ಇರುವ ಮಕ್ಕಳೇ ಕೆಲವೊಮ್ಮೆ ತಪ್ಪು ದಾರಿ ಹಿಡಿಯುವುದುಂಟು, ಹೀಗಿರುವಾಗ ಯಾರೂ ಇಲ್ಲದ ಮಕ್ಕಳ ಪರಿಸ್ಥಿತಿ ಏನು? ಅಂತಹ ಮುಗ್ಧ ಮಕ್ಕಳಿಗೆ ಹೆಣ್ಣು ಮಗುವೊಂದು ಸಿಕ್ಕು, ಆ ಮಗುವನ್ನು ಸಾಕಲು ಏನೆಲ್ಲಾ ಹರಸಾಹಸ ಪಡುತ್ತಾರೆ? ಜತೆಗೆ ಪ್ರೀತಿಯ ಟ್ರ್ಯಾಕ್ ಕೂಡ ಚಿತ್ರದಲ್ಲಿದೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಮಹೇಶ್ ಬಾಬು.
ಚಿತ್ರದಲ್ಲಿ ಅಂಜನ್, ಸಚಿನ್ ಪುರೋಹಿತ್, ಅಂಜನಾ, ಲಯಾ ಕೋಕಿಲ, ರಘು ಮತ್ತು ಬೇಬಿ ಅಂಕಿತಾ ಮೂರ್ತಿ, ಮಾನ್ಯ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ವಿ. ಮನೋಹರ್ ಸಂಗೀತ ಮತ್ತು ಸಾಹಿತ್ಯ, ಮನು ವಿಜಯ್ ಕುಮಾರ್ ಛಾಯಾಗ್ರಹಣ, ಮಲ್ಲು ಸಂಕಲನ, ಕೌರವ ವೆಂಕಟೇಶ್ ಸಾಹಸ ಹಾಗೂ ಗಣೇಶ್ ನೃತ್ಯ ನಿರ್ದೇಶನವಿರಲಿದೆ.