ದಳಪತಿ ವಿಜಯ್ ಅವರು ‘ವಾರಿಸು’ ಸಿನಿಮಾದ ಬಳಿಕ ‘ಲಿಯೋ’ ಚಿತ್ರದ ಕೆಲಸ ಬ್ಯುಸಿಯಾಗಿದ್ದಾರೆ. ‘ಲಿಯೋ’ ಸಿನಿಮಾಗೆ ಕೇರಳದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾದ ಬಗ್ಗೆ ಕೇರಳದ ಮಂದಿ ಕಿಡಿಕಾರುತ್ತಿದ್ದಾರೆ. ಅದರಲ್ಲೂ ಮೋಹನ್ಲಾಲ್ ಅಭಿಮಾನಿಗಳು ಹೆಚ್ಚು ಗರಂ ಆಗಿದ್ದಾರೆ. ‘ಲಿಯೋ’ ಸಿನಿಮಾವನ್ನು ಬಹಿಷ್ಕರಿಸುವಂತೆ ಮೋಹನ್ಲಾಲ್ ಫ್ಯಾನ್ಸ್ ಕರೆನೀಡಿದ್ದಾರೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ #KeralaBoycottLEO ಹ್ಯಾಶ್ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಕಿರಿಕ್ ಶುರುವಾಗಲು ಕಾರಣ ಆಗಿರುವುದು ಅಭಿಮಾನಿಗಳು. ದಳಪತಿ ವಿಜಯ್ ಫ್ಯಾನ್ಸ್ ಮತ್ತು ಮೋಹನ್ಲಾಲ್ ಫ್ಯಾನ್ಸ್ ಚಿಕ್ಕ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಜಗಳ ಮಾಡಿಕೊಂಡಿದ್ದಾರೆ. 2014ರಲ್ಲಿ ತೆರೆಕಂಡ ‘ಜಿಲ್ಲಾ’ ಸಿನಿಮಾದಲ್ಲಿ ದಳಪತಿ ವಿಜಯ್ ಮತ್ತು ಮೋಹನ್ಲಾಲ್ ನಟಿಸಿದ್ದರು. ಮೋಹನ್ಲಾಲ್ ಅವರ ನಟನೆ ಬಗ್ಗೆ ವಿಜಯ್ ಅವರ ಅಭಿಮಾನಿಯೊಬ್ಬ ಕೆಟ್ಟದಾಗಿ ಕಮೆಂಟ್ ಮಾಡಿದ ಬಳಿಕ ಈ ವಾರ್ ಶುರುವಾಗಿದೆ.
ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾವನ್ನು ಕೇರಳದಲ್ಲಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಮೋಹನ್ಲಾಲ್ ಫ್ಯಾನ್ಸ್ ಪಟ್ಟುಹಿಡಿದಿದ್ದಾರೆ.‘ಲಿಯೋ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.
ತಮಿಳಿನ ಈ ಸಿನಿಮಾ ಕನ್ನಡ, ಮಲಯಾಳಂ, ಹಿಂದಿ ಮತ್ತು ತೆಲುಗಿಗೆ ಡಬ್ ಆಗಿ ತೆರೆ ಕಾಣಲಿದೆ. ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಒಂದು ವೇಳೆ ಬಹಿಷ್ಕಾರದ ಬಿಸಿ ತಟ್ಟಿದರೆ ನಿರ್ಮಾಪಕರಿಗೆ ತೊಂದರೆ ಆಗಲಿದೆ.
ಅಭಿಮಾನಿಗಳು ಶುರುಮಾಡಿದ ಕಿರಿಕ್ ಬಗ್ಗೆ ಮೋಹನ್ಲಾಲ್ ಮತ್ತು ದಳಪತಿ ವಿಜಯ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.