ಬಿಜೆಪಿಗೆ ಪಶ್ಚಾತಾಪವಾಗುವವರೆಗೆ ಹೋರಾಟ; ಶಾಸಕ ಯಶವಂತರಾಯಗೌಡ ಪಾಟೀಲ

CONGRESS RALY INDI MLA
ಫೋಟೊ: ವಿಜೆಪಿ-19-1(3) ವಿಜಯಪುರದ ಮಹಾತ್ಮ ಗಾಂಧಿ ವೃತ್ತದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಪ್ರತಿಭಟನಾ ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದರು.
Published on

ನಿಷ್ಕಳಂಕ, ಪ್ರಾಮಾಣಿಕ, ಜಾತ್ಯಾತೀತ ನಾಯಕ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸಿರುವ ಬಿಜೆಪಿಗೆ ಪಶ್ಚಾತಾಪವಾಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಖಾರವಾಗಿ ನುಡಿದರು.

ಸೋಮವಾರ ಜಿಲ್ಲಾ ಕಾಂಗ್ರೆಸ್ ಕಮೀಟಿ ಕರೆಯ ಮೇರೆಗೆ ನಡೆದ ಬೃಹತ್ ಪ್ರತಿಭಟನಾ ಮೆರವಣಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುದೀರ್ಘ 40 ವರ್ಷದ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ರಾಜಕಾರಣ ಮಾಡಿದವರಿ ಸಿದ್ದರಾಮಯ್ಯ. ಬಡ- ರೈತ ಕುಟುಂಬದಿಂದ ಬಂದ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿ ಯಶಸ್ವಿ ಆಡಳಿತ ನೀಡುತ್ತಿದ್ದಾರೆ. 15 ಬಾರಿ ಬಜೆಟ್ ಮಂಡಿಸಿದ ಏಕೈಕ ನಾಯಕ ಸಿದ್ದರಾಮಯ್ಯ. ಬಸವ- ಬುದ್ಧ- ಅಂಬೇಡ್ಕರ್ ಅವರ ತತ್ವಾದರ್ಶದ ಅಡಿಯಲ್ಲಿ ರಾಜಕಾರಣ ಮಾಡಿದವರು ಸಿದ್ದರಾಮಯ್ಯ. ಎಸ್‌ಸಿ- ಎಸ್‌ಟಿ ಸಮುದಾಯಕ್ಕೆ ಆದ್ಯತೆ ನೀಡಿದ ನಾಯಕ. ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಶ್ರಮಿಸಿದವರು. ಗ್ಯಾರಂಟಿ ಯೋಜನೆ ಮೂಲಕ ಜನಮನ ಗದ್ದ ನಾಯಕ. ಇಂಥ ನಾಯಕನಿಗೆ ಕಳಂಕ ತರಲು ಹುನ್ನಾರ ನಡೆದಿದೆ. ರಾಜ್ಯದ ಜನ ಇದಕ್ಕೆ ಪ್ರತಿಯಾಗಿ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದರು.

ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸಾಮಾಜಿಕ ನ್ಯಾಯದ ಪರ ಆಡಳಿತ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಬಲಹೀನಗೊಳಿಸುವ ಹುನ್ನಾರ ನಡೆದಿದೆ. ಸರ್ಕಾರ ಅಸ್ಥಿರಗೊಳಿಸುವ ಕುತಂತ್ರ ನಡೆದಿದ್ದು, ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ತಂತ್ರಕ್ಕೆ ಪ್ರತಿಯಾಗಿ ರಾಜ್ಯ ಜನ ವಿಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಕಿಡಿಕಾರಿದರು.

ಜನರ ಮನಸ್ಸು ಗೆದ್ದ ಅಧಿಪತಿ ಸಿದ್ದರಾಮಯ ತಮ್ಮ 40 ವರ್ಷದ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ರಾಜಕಾರಣ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಸುಳ್ಳು ಆಪಾದನೆ ಮಾಡುತ್ತಿವೆ. ರಾಜಭಾವನ ಬಿಜೆಪಿ ಕಾರ್ಯಾಲಯ ಆಗಿದೆ. ರಾಜ್ಯಪಾಲರ ನಡೆ ಖಂಡಿಸಿ ತಾಲೂಕು ಹಾಗೂ ಗ್ರಾಮ ಮಟ್ಟದವರೆಗೂ ಹೋರಾಟ ವಿಸ್ತರಿಸಲಾಗುವುದು ಎಂದರು.

ಸಚಿವ ಎಂ.ಬಿ. ಪಾಟೀಲ, ಸಿ.ಎಸ್. ನಾಡಗೌಡ, ಅಶೋಕ ಮನಗೂಳಿ, ಸುನೀಲಗೌಡ ಪಾಟೀಲ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮಾಜಿ ಶಾಸಕರಾದ ರಾಜು ಆಲಗೂರ, ಡಾ.ಮಕ್ಬುಲ್ ಬಾಗವಾನ, ಮುಖಂಡರಾದ ಅದ್ಬುಲ್‌ಹಮೀದ್ ಮುಶ್ರೀಫ್, ಸಂಗಮೇಶ ಬಬಲೇಶ್ವರ, ಕಾಂತಾ ನಾಯಿಕ, ಎಸ್.ಎಂ. ಪಾಟೀಲ ಗಣಿಹಾರ, ಸೋಮನಾಥ ಕಳ್ಳಿಮನಿ, ಸಚಿವ ಶಿವಾನಂದ ಪಾಟೀಲರ ಪುತ್ರ ಸತ್ಯಜೀತ ಮತ್ತಿತರರಿದ್ದರು. ಜಿಲ್ಲಾಧಿಕಾರಿ ಟಿ.ಭೂಬಾಲನ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net