ಮುಡಾ ಪ್ರಕರಣದಲ್ಲಿ ಪ್ಯಾಸಿಕ್ಯೂಷನ್ ಅನುಮತಿಗೆ ಖಂಡನೆ, ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ

CONGRESS RALY MUDA CASE
ವಿಜಯಪುರ ಸಿದ್ಧೇಶ್ವರ ದೇವಸ್ಥಾನದಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡ ಜನಸ್ತೋಮ.
Published on

ವಿಜಯಪುರ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸೋಮವಾರ ಕಾಂಗ್ರೆಸ್ ಕರೆ ನೀಡಿದ್ದ ಪ್ರತಿಭಟನಾ ರ‌್ಯಾಲಿಗೆ ವಿವಿಧ ಸಂಘ-ಸಂಸ್ಥೆಗಳು, ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.

ಇಲ್ಲಿನ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಮಹಾತ್ಮ ಗಾಂಧಿ, ಬಸವೇಶ್ವರ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಮಹಿಳೆಯರು, ಯುವಕ-ಯುವತಿಯರು ಹಾಗೂ ವೃದ್ಧರಾದಿಯಾಗಿ ಎಲ್ಲ ವರ್ಗದ ಜನ ಪಾಲ್ಗೊಂಡಿದ್ದರು.

ಮಾರ್ಗದುದ್ದಕ್ಕೂ ರಾಜ್ಯಪಾಲರ ವಿರುದ್ಧ ಘೋಷಣೆ ಮೊಳಗಿಸಲಾಯಿತು. ರಾಜ್ಯಪಾಲ ಹಠಾವೋ ಸಂವಿಧಾನ ಬಚಾವೋ…ರಾಜ್ಯಪಾಲರಿಗೆ ಧಿಕ್ಕಾರ, ಪ್ರಧಾನಿ ಮೋದಿ-ಅಮಿತ್ ಷಾಗೆ ಧಿಕ್ಕಾರ ಎನ್ನುತ್ತಾ, ಸಿಎಂ ಸಿದ್ದರಾಮಯ್ಯಗೆ ಜೈಕಾರ ಕೂಗುತ್ತಾ, ಕಾಂಗ್ರೆಸ್ ಬಾವುಟದ ಜೊತೆಗೆ ವಿವಿಧ ಸಮುದಾಯಗಳ ಬಾವುಟಗಳನ್ನು ಹಿಡಿದ ಜನ ವಿವಿಧ ವಾದ್ಯವೃಂದಗಳ ಅಬ್ಬರದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಎಂ.ಬಿ. ಪಾಟೀಲ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಸಿ.ಎಸ್. ನಾಡಗೌಡ, ಅಶೋಕ ಮನಗೂಳಿ, ಸುನೀಲಗೌಡ ಪಾಟೀಲ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮಾಜಿ ಶಾಸಕರಾದ ರಾಜು ಆಲಗೂರ, ಡಾ.ಮಕ್ಬುಲ್ ಬಾಗವಾನ, ಮುಖಂಡರಾದ ಅದ್ಬುಲ್‌ಹಮೀದ್ ಮುಶ್ರೀಫ್, ಸಂಗಮೇಶ ಬಬಲೇಶ್ವರ, ಕಾಂತಾ ನಾಯಿಕ, ಎಸ್.ಎಂ. ಪಾಟೀಲ ಗಣಿಹಾರ, ಸೋಮನಾಥ ಕಳ್ಳಿಮನಿ, ಸಚಿವ ಶಿವಾನಂದ ಪಾಟೀಲರ ಪುತ್ರ ಸತ್ಯಜೀತ ಮತ್ತಿತರ ನಾಯಕರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಜಿಲ್ಲಾಧಿಕಾರಿ ಟಿ.ಭೂಬಾಲನ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net