ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿಯಾಗಿ ಪರಿವರ್ತನೆ, ಸಚಿವ ಎಂ.ಬಿ. ಪಾಟೀಲ ವ್ಯಂಗ್ಯ

CONGRESS PROTEST MB PATIL LEAD
ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಬಹಿರಂಗ ಸಮಾವೇಶವನ್ನುದ್ದೇಶಿಸಿ ಸಚಿವ ಡಾ.ಎಂ.ಬಿ. ಪಾಟೀಲ ಮಾತನಾಡಿದರು. ಶಾಸಕರಾದ ಯಶವಂತರಾಯಗೌಡ ಪಾಟೀಲ, ಸಿ.ಎಸ್. ನಾಡಗೌಡ, ಸುನೀಲಗೌಡ ಪಾಟೀಲ ಮತ್ತಿತರರಿದ್ದಾರೆ.
Published on

ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಕಾನೂನು ರಕ್ಷಣೆ ಮಾಡಲಿಲ್ಲ, ಸತ್ಯ ರಕ್ಷಣೆ ಮಾಡಲಿಲ್ಲ. ಬಿಜೆಪಿ ಏಜೆಂಟ್ ಥರ ಕೆಲಸ ಮಾಡಿದ್ದಾರೆ. ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿಯನ್ನಾಗಿಸಲಾಗುತ್ತಿದೆ. ಹೀಗಾಗಿ ಕೂಡಲೇ ರಾಜ್ಯಪಾಲರನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕೆಂದು ಸಚಿವ ಎಂ.ಬಿ. ಪಾಟೀಲ ಆಗ್ರಹಿಸಿದರು.

ಸೋಮವಾರ ಜಿಲ್ಲಾ ಕಾಂಗ್ರೆಸ್ ಕಮೀಟಿ ಕರೆಯ ಮೇರೆಗೆ ನಡೆದ ಬೃಹತ್ ಪ್ರತಿಭಟನಾ ಮೆರವಣಿಯ ನೇತೃತ್ವ ವಹಿಸಿ ಮಾತನಾಡಿದ ಅವರು, ರಾಜ್ಯಪಾಲರ ತೀರ್ಮಾನದಲ್ಲಿ ಕಾನೂನು ಉಲ್ಲಂಘನೆ ಇದೆ, ಸಂವಿಧಾನದ ಉಲ್ಲಂಘನೆ ಇದೆ, ಷಡ್ಯಂತ್ರ ಅಡಗಿದೆ. ಈಗಾಗಲೇ ಇಂಥ ಷಡ್ಯಂತ್ರಗಳು ದೆಹಲಿ, ಉತ್ತರಖಾಂಡ, ತಮಿಳುನಾಡಿನಲ್ಲಿ ನಡೆದಿವೆ. ಇಂಥ ಷಡ್ಯಂತ್ರಗಳಿಂದಾಗಿ ಸಿದ್ದರಾಮಯ್ಯ ದುರ್ಬಲವಾಗುತ್ತಾರೆಂಬುದು ಕೇವಲ ಭ್ರಮೆ. ಬದಲಾಗಿ ಸಿದ್ದರಾಮಯ್ಯ ಶಕ್ತಿ ಇನ್ನಷ್ಟು ಹೆಚ್ಚಾಗಿದೆ. ಇಲ್ಲಿ ಮೋದಿ-ಅಮಿತ್ ಷಾ ಆಟ ನಡೆಯಲ್ಲ. ಕರ್ನಾಟಕದ ಏಳು ಕೋಟಿ ಜನ ಸಿದ್ದರಾಮಯ್ಯ ಬೆನ್ನಿಗಿದ್ದಾರೆ. ಇಂಥ ಷಡ್ಯಂತ್ರಗಳನ್ನು ಕರ್ನಾಟಕದ ಜನ ಯಾವತ್ತೂ ಸಹಿಸೋದಿಲ್ಲ ಎಂದರು.

ಇದೇ ರಾಜ್ಯಪಾಲರ ಮುಂದೆ ಶಶಿಕಲಾ ಜೊಲ್ಲೆ ಮೇಲೆ ಪ್ರಾಸಿಕ್ಯೂಷನ್ಗೆ ಲೋಕಾಯುಕ್ತರು ಗವರ್ನರ್‌ಗೆ ಪತ್ರ ಬರೆದಿದ್ದಾರೆ, ಮುರುಗೇಶ ನಿರಾಣಿ ಮೇಲೆ ನಡೆಸಿದ ಪ್ರಾಥಮಿಕ ತನಿಖೆ ವರದಿ ರಾಜ್ಯಪಾಲರ ಮುಂದಿದೆ, ಜನಾರ್ಧನ ರೆಡ್ಡಿ ಮೇಲೆ ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮೇಲಿನ ತನಿಖೆ ವರದಿಯೂ ರಾಜ್ಯಪಾಲರ ಮುಂದಿದೆ. ಹಲವು ತಿಂಗಳಾದರೂ ಆ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದ ರಾಜ್ಯಪಾಲರು ಪ್ರಾಥಮಿಕ ತನಿಖೆ ನಡೆಯದೇ, ಸುಳ್ಳು ಆರೋಪದ ಮೇರೆಗೆ ನೀಡಿದ ಅರ್ಜಿಯನ್ನಾಧರಿಸಿ ತರಾತುರಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ನೋಡಿದರೆ ಇವರ ಉದ್ದೇಶ ಸರಿಯಿಲ್ಲ ಎಂಬುದು ಸ್ಪಷ್ಟವಾಗಿ ಗೋಚಿರಿಸುತ್ತದೆ. ಯಾರದ್ದೋ ಒತ್ತಡದಿಂದ ಇಂಥ ನಿರ್ಧಾರ ಕೈಗೊಳ್ಳುವ ಮೂಲಕ ರಾಜ್ಯಪಾಲರು ಸಂವಿಧಾನದ ಆಶಯಕ್ಕೆ ಧಕ್ಕೆ ತಂದಿದ್ದಾರೆಂದು ಎಂ.ಬಿ. ಪಾಟೀಲ ಆರೋಪಿಸಿದರು.

ಶಾಸಕರಾದ ಯಶವಂತರಾಯಗೌಡ ಪಾಟೀಲ, ಸಿ.ಎಸ್. ನಾಡಗೌಡ, ಅಶೋಕ ಮನಗೂಳಿ, ಸುನೀಲಗೌಡ ಪಾಟೀಲ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮಾಜಿ ಶಾಸಕರಾದ ರಾಜು ಆಲಗೂರ, ಡಾ.ಮಕ್ಬುಲ್ ಬಾಗವಾನ, ಮುಖಂಡರಾದ ಅದ್ಬುಲ್‌ಹಮೀದ್ ಮುಶ್ರೀಫ್, ಸಂಗಮೇಶ ಬಬಲೇಶ್ವರ, ಕಾಂತಾ ನಾಯಿಕ, ಎಸ್.ಎಂ. ಪಾಟೀಲ ಗಣಿಹಾರ, ಸೋಮನಾಥ ಕಳ್ಳಿಮನಿ, ಸಚಿವ ಶಿವಾನಂದ ಪಾಟೀಲರ ಪುತ್ರ ಸತ್ಯಜೀತ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net