ಈ ಕಾರಣಕ್ಕೆ ಟೀಮ್​ ಇಂಡಿಯಾ ವಿರುದ್ಧ ಸೋತೆವು... ಇದು ನಡೆದಿದ್ರೆ ನಮ್ಮದೇ ಗೆಲುವು ಎಂದ ಪಾಕ್​ ನಾಯಕಿ! Fatima sana

Fatima sana
Published on

Fatima sana : ಪ್ರಸ್ತುತ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್​ ಇಂಡಿಯಾ ತನ್ನ ಪ್ರಾಬಲ್ಯ ಮೆರೆಯುತ್ತಿದೆ. ಹರ್ಮನ್​ಪ್ರೀತ್​ ಕೌರ್​ ನೇತೃತ್ವದ ಭಾರತ ತಂಡ ಸತತ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಭಾನುವಾರ (ಅ.05) ಶ್ರೀಲಂಕಾದ ಕೊಲಂಬೊದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಟೀಮ್​ ಇಂಡಿಯಾದ 88 ರನ್‌ಗಳ ಭಾರಿ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್​ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ 247 ರನ್​ಗಳನ್ನು ಕಲೆಹಾಕಿತು. ತಂಡದ ಪರ ಬ್ಯಾಟ್ಸ್‌ವುಮನ್‌ಗಳಾದ ಹರ್ಲೀನ್ ಡಿಯೋಲ್ (46 ರನ್​, 65 ಎಸೆತ, 4 ಬೌಂಡರಿಗಳು, 1 ಸಿಕ್ಸರ್), ರಿಚಾ ಘೋಷ್ (ಔಟಾಗದೆ 35 ರನ್​, 20 ಎಸೆತ, 3 ಬೌಂಡರಿ, 2 ಸಿಕ್ಸರ್‌), ಜೆಮಿಮಾ ರೋಡ್ರಿಗಸ್​ (32 ರನ್​, 37 ಎಸೆತ, 5 ಬೌಂಡರಿ) ಮತ್ತು ಪ್ರತೀಕ್ ರಾವಲ್ (31 ರನ್​, 37 ಎಸೆತ, 5 ಬೌಂಡರಿ) ಸಂಘಟಿತ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಪಾಕಿಸ್ತಾನಿ ಬೌಲರ್‌ಗಳಲ್ಲಿ ಡಯಾನಾ ಬೇಗ್ ನಾಲ್ಕು ವಿಕೆಟ್ ಪಡೆದರೆ, ನಾಯಕಿ ಫಾತಿಮಾ ಸನಾ ಮತ್ತು ಸಾದಿಯಾ ಇಕ್ಬಾಲ್ ತಲಾ ಎರಡು ವಿಕೆಟ್ ಪಡೆದರು.

ಬಳಿಕ 248 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 43 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಸಿದ್ರಾ ಅಮೀನ್ (81 ರನ್​, 106 ಎಸೆತ, 9 ಬೌಂಡರಿ, 1 ಸಿಕ್ಸರ್) ಪಾಕಿಸ್ತಾನ ಪರ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪದರ್ಶನ ನೀಡುವಲ್ಲಿ ಹೀನಾಯವಾಗಿ ವಿಫಲವಾದರು. ಅಂತಿಮವಾಗಿ ಪಾಕಿಸ್ತಾನ, ಟೀಮ್​ ಇಂಡಿಯಾದ ವಿರುದ್ಧ ಮಂಡಿಯೂರಿತು. ಟೀಮ್​ ಇಂಡಿಯಾ ಬೌಲರ್‌ಗಳಲ್ಲಿ, ಕ್ರಾಂತಿ ಗೌಡ್ ಮತ್ತು ದೀಪ್ತಿ ಶರ್ಮಾ ತಲಾ ಮೂರು ವಿಕೆಟ್ ಪಡೆದರೆ, ಸ್ನೇಹ್ ರಾಣಾ ಎರಡು ವಿಕೆಟ್ ಪಡೆದರು ಮಿಂಚಿದರು.

ಪಂದ್ಯದ ನಂತರ ಮಾತನಾಡಿದ ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ, ಭಾರತವನ್ನು ಕಡಿಮೆ ಸ್ಕೋರ್‌ಗೆ ಕಟ್ಟಿಹಾಕುವಲ್ಲಿ ವಿಫಲವಾಗಿದ್ದೇ ನಮ್ಮ ಸೋಲಿಗೆ ಪ್ರಮುಖ ಕಾರಣ ಎಂದರು. ನಾವು ಪವರ್ ಪ್ಲೇನಲ್ಲಿ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟೆವು. ಅದೇ ರೀತಿ, ಇನ್ನಿಂಗ್ಸ್‌ನ ಕೊನೆಯಲ್ಲಿ, ಅಂದರೆ ಡೆತ್ ಓವರ್‌ಗಳಲ್ಲಿ ಉದಾರವಾಗಿ ರನ್‌ಗಳನ್ನು ಟೀಮ್​ ಇಂಡಿಯಾಗೆ ಬಿಟ್ಟುಕೊಟ್ಟೆವು. ಈ ರನ್‌ಗಳಿಂದಾಗಿ ಭಾರತ, ಉತ್ತಮ ಸ್ಕೋರ್ ಗಳಿಸಿತು ಎಂದು ಸನಾ ಹೇಳಿದರು.

ನಾನು ಬೌಲಿಂಗ್ ಮಾಡಿದಾಗ, ಚೆಂಡು ಸ್ವಿಂಗ್ ಆಗುತ್ತಿರುವಂತೆ ತೋರುತ್ತಿತ್ತು. ಆದರೆ, ಡಯಾನಾ ಬೇಗ್ ಸೀಮ್ ಮತ್ತು ಸ್ವಿಂಗ್ ನಡುವೆ ಸ್ವಲ್ಪ ಗೊಂದಲಕ್ಕೆ ಒಳಗಾದರು. ಚೆಂಡು ಸ್ವಿಂಗ್ ಆಗುತ್ತದೆ ಮತ್ತು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ನಾನು ಅವಳಿಗೆ ಹೇಳುತ್ತಲೇ ಇದ್ದೆ. ನಮ್ಮ ಮುಂದಿನ ಪಂದ್ಯದಲ್ಲಿ ಆಕೆ ಉತ್ತಮವಾಗಿ ಆಡುತ್ತಾಳೆ ಎಂದು ನಾನು ಭಾವಿಸುತ್ತೇನೆ. ಭಾರತವನ್ನು ಮೊದಲು 200 ಕ್ಕಿಂತ ಕಡಿಮೆ ರನ್‌ಗಳಿಗೆ ಸೀಮಿತಗೊಳಿಸಿದ್ದರೆ ಉತ್ತಮವಾಗಿತ್ತು. ನಾವು ಆ ಮೊತ್ತವನ್ನು ಸುಲಭವಾಗಿ ಸಾಧಿಸಬಹುದಿತ್ತು ಎಂದು ಸನಾ ತಿಳಿಸಿದರು.

ಬೌಲಿಂಗ್​ ಮಾತ್ರವಲ್ಲ ನಾವು ಬ್ಯಾಟಿಂಗ್‌ನಲ್ಲೂ ಸ್ವಲ್ಪ ಕಷ್ಟಪಟ್ಟಿದ್ದೇವೆ. ಆದರೆ, ನಮ್ಮ ಬ್ಯಾಟಿಂಗ್ ಲೈನ್‌ಅಪ್ ಅದ್ಭುತವಾಗಿದೆ. ಟಾಪ್ 5ರಲ್ಲಿ ಉತ್ತಮ ಬ್ಯಾಟ್ಸ್‌ವುಮನ್‌ಗಳಿದ್ದಾರೆ. ನಮ್ಮ ಮುಂದಿನ ಪಂದ್ಯದಲ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಾರೆಂದು ನಾವು ನಿರೀಕ್ಷಿಸುತ್ತೇವೆ. ಬ್ಯಾಟಿಂಗ್‌ನಲ್ಲಿ ನಾವು ಉತ್ತಮ ಜೊತೆಯಾಟವನ್ನು ನಿರ್ಮಿಸಬೇಕಾಗಿದೆ. ಈ ಪಂದ್ಯದಲ್ಲಿ ನಾವು ಅದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಸನಾ ತಿಳಿಸಿದರು.

ಇನ್ನು ಸಿದ್ರಾ ಅವರ ಹೋರಾಟವನ್ನು ನಾವು ಮೆಚ್ಚಲೇಬೇಕು. ಅವರು ನೆಟ್ಸ್‌ನಲ್ಲಿ ತುಂಬಾ ಕಷ್ಟಪಟ್ಟು ಅಭ್ಯಾಸ ಮಾಡುತ್ತಾರೆ. ಸಿದ್ರಾ ನಮ್ಮ ತಂಡದ ಪ್ರಮುಖ ಸದಸ್ಯೆ ಎಂದು ಸನಾ ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net