ಮುನೀಬಾ ಅಲಿ ರನೌಟ್ ತೀರ್ಪು ತಪ್ಪೆಂದ ಪಾಕ್​ ನಾಯಕಿ ಫಾತಿಮಾ ಸನಾ... ಐಸಿಸಿ ನಿಯಮ ಏನು ಹೇಳುತ್ತೆ ಗೊತ್ತಾ? IND vs PAK

IND Vs PAK
Published on

IND vs PAK : ಮಹಿಳಾ ಏಕದಿನ ವಿಶ್ವಕಪ್ 2025ರ ಭಾಗವಾಗಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾನುವಾರ (ಅ.05) ಕೊಲಂಬೊದಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು. ಆದಾಗ್ಯೂ, ಈ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟ್ಸ್‌ವುಮನ್​ ಮುನೀಬಾ ಅಲಿ ರನೌಟ್ ಆದ ರೀತಿ ಇದೀಗ ಭಾರಿ ಚರ್ಚೆಗೀಡಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಮ್​ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 247 ರನ್ ಗಳಿಸಿತು. ಭಾರತದ ಪರ ಹರ್ಲೀನ್ ಡಿಯೋಲ್ (46), ರಿಚಾ ಘೋಷ್ (ಔಟಾಗದೆ 35 ರನ್​), ಜೆಮಿಮಾ ರೋಡ್ರಿಗಸ್ (32) ಮತ್ತು ಪ್ರತೀಕ್ ರಾವಲ್ (31) ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಪಾಕಿಸ್ತಾನದ ಪರ ಡಯಾನಾ ಬೇಗ್ ನಾಲ್ಕು ವಿಕೆಟ್ ಪಡೆದರೆ, ಫಾತಿಮಾ ಸನಾ ಮತ್ತು ಸಾದಿಯಾ ಇಕ್ಬಾಲ್ ತಲಾ ಎರಡು ವಿಕೆಟ್ ಪಡೆದರು.

ಟೀಮ್​ ಇಂಡಿಯಾ ಇನ್ನಿಂಗ್ಸ್​ ಮುಕ್ತಾಯವಾದ ಬಳಿಕ ಪಾಕಿಸ್ತಾನ ತಂಡ 248 ರನ್‌ಗಳ ಗುರಿಯೊಂದಿಗೆ ಮೈದಾನಕ್ಕೆ ಪ್ರವೇಶಿಸಿತು. ಈ ವೇಳೆ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು. ಈ ಓವರ್ ಅನ್ನು ಕ್ರಾಂತಿ ಗೌಡ್ ಬೌಲ್ ಮಾಡಿದರು. ಓವರ್‌ನ ಕೊನೆಯ ಎಸೆತವನ್ನು ಪಾಕಿಸ್ತಾನಿ ಬ್ಯಾಟ್ಸ್​ವುಮನ್​ ಮುನಿಬಾ ಅಲಿ ಎದುರಿಸಿದರು. ಈ ವೇಳೆ ಚೆಂಡು ಬ್ಯಾಟ್ ತಪ್ಪಿ ಮುನಿಬಾ ಅವರ ಪ್ಯಾಡ್‌ಗಳಿಗೆ ತಗುಲಿತು. ಭಾರತೀಯ ಫೀಲ್ಡರ್‌ಗಳು ಎಲ್‌ಬಿಡಬ್ಲ್ಯೂಗೆ ಮನವಿ ಮಾಡಿದರು ಮತ್ತು ಫೀಲ್ಡ್ ಅಂಪೈರ್ ನಾಟ್ ಔಟ್ ಎಂದು ಹೇಳಿದರು.

ಅದೇ ಸಮಯದಲ್ಲಿ, ಭಾರತೀಯ ಫೀಲ್ಡರ್ ದೀಪ್ತಿ ಶರ್ಮಾ ಚೆಂಡನ್ನು ನೇರವಾಗಿ ವಿಕೆಟ್‌ಗಳತ್ತ ಎಸೆದರು, ಇದರಿಂದಾಗಿ ಸ್ಟಂಪ್‌ಗಳು ಕೆಳಗೆ ಬಿದ್ದವು. ಈ ವೇಳೆ ಟೀಮ್ ಇಂಡಿಯಾ ಆಟಗಾರರು ಮತ್ತೆ ಮೇಲ್ಮನವಿ ಸಲ್ಲಿಸಿದರು. ಬಳಿಕ ಫೀಲ್ಡ್ ಅಂಪೈರ್, ಥರ್ಡ್​ ಅಂಪೈರ್ ಸಹಾಯ ಕೋರಿದರು. ರನೌಟ್​ ಪರಿಶೀಲನೆಯ ಸಮಯದಲ್ಲಿ ಚೆಂಡು ವಿಕೆಟ್‌ಗಳಿಗೆ ತಾಗಿ, ಬೇಲ್ಸ್​ ಕೆಳಗಡೆ ಬೀಳುವ ಸಮಯದಲ್ಲಿ ಮುನಿಬಾ ಅವರ ಬ್ಯಾಟ್‌ ಗಾಳಿಯಲ್ಲಿದ್ದ ಕಾರಣ, ಮೂರನೇ ಅಂಪೈರ್ ಅವರನ್ನು ಔಟ್ ಎಂದು ಘೋಷಿಸಿದರು. ಇದರೊಂದಿಗೆ, ಮುನಿಬಾ ತೀವ್ರ ಹತಾಶೆಯಿಂದ, ಸಪ್ಪೆ ಮುಖ ಮಾಡಿಕೊಂಡು ಪೆವಿಲಿಯನ್​ ತಲುಪಿದರು. ಇದರೊಂದಿಗೆ, ಪಾಕಿಸ್ತಾನ ಆರು ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು.

ಆದರೆ, ಪಾಕಿಸ್ತಾನ ನಾಯಕಿ ಫಾತಿಮಾ ಸನಾ ಬೌಂಡರಿ ಲೈನ್‌ನಲ್ಲಿ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಮುನಿಬಾ ಯಾವುದೇ ರನ್ ಗಳಿಸಲು ಪ್ರಯತ್ನಿಸುತ್ತಿರಲಿಲ್ಲ ಆದ್ದರಿಂದ, ಅದು ರನ್ ಔಟ್ ಅಲ್ಲ ಎಂದು ವಾದಿಸಿದರು. ಆದಾಗ್ಯೂ, ನಾಲ್ಕನೇ ಅಂಪೈರ್ ಕೂಡ ಐಸಿಸಿ ನಿಯಮಗಳ ಪ್ರಕಾರ ಅದು ಔಟ್ ಎಂದು ಅವರಿಗೆ ಸ್ಪಷ್ಟವಾಗಿ ವಿವರಿಸಿದರು.

ಐಸಿಸಿ ನಿಯಮಗಳು ಏನು ಹೇಳುತ್ತದೆ?

ಎಂಸಿಸಿ ನಿಯಮಗಳ ಪ್ರಕಾರ, ಚೆಂಡು ವಿಕೆಟ್‌ಗಳಿಗೆ ತಾಗಿದಾಗ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿ ಇಲ್ಲದಿದ್ದರೆ ಅವರನ್ನು ಔಟ್ ಎಂದು ಪರಿಗಣಿಸಲಾಗುತ್ತದೆ. ಬ್ಯಾಟ್ಸ್‌ಮನ್ ತನ್ನ ಬ್ಯಾಟ್, ಕಾಲು ಅಥವಾ ದೇಹದ ಯಾವುದೇ ಭಾಗದೊಂದಿಗೆ ಕ್ರೀಸ್‌ನಲ್ಲಿರಬೇಕು. ಕ್ರೀಸ್ ರೇಖೆಯಿಂದ ಅರ್ಧಕ್ಕಿಂತ ಹೆಚ್ಚು ಮೇಲಿದ್ದರೆ, ಅವರನ್ನು ಔಟ್ ಎಂದು ಪರಿಗಣಿಸಲಾಗುತ್ತದೆ.

ಇನ್ನು ಸಿದ್ರಾ ಅಮೀನ್ (81 ರನ್​, 106 ಎಸೆತ, 9 ಬೌಂಡರಿ, 1 ಸಿಕ್ಸರ್) ಪಾಕ್​ ತಂಡದ ಪರ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸುವಲ್ಲಿ ದಯನೀಯವಾಗಿ ವಿಫಲರಾದರು. ಅಂತಿಮವಾಗಿ ಪಾಕಿಸ್ತಾನ 43 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 88 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಭಾರತೀಯ ಬೌಲರ್‌ಗಳಲ್ಲಿ ಕ್ರಾಂತಿ ಗೌಡ್ ಮತ್ತು ದೀಪ್ತಿ ಶರ್ಮಾ ತಲಾ ಮೂರು ವಿಕೆಟ್ ಪಡೆದರು. ಸ್ನೇಹ್ ರಾಣಾ ಎರಡು ವಿಕೆಟ್ ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net