141 ಎಸೆತ, 35 ಸಿಕ್ಸರ್‌... ಏಕದಿನ ಪಂದ್ಯದಲ್ಲಿ ತ್ರಿಶತಕ ಸಿಡಿಸಿದ ಭಾರತೀಯ ಮೂಲದ ಆಸಿಸ್​ ಕ್ರಿಕೆಟಿಗ! Harjas Singh

Harjas Singh
Published on

Harjas Singh : ಏಕದಿನ ಮಾದರಿ ಪಂದ್ಯಗಳಲ್ಲಿ ಶತಕ ಬಾರಿಸುವುದನ್ನೇ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಹೀಗಿರುವಾಗ ದ್ವಿಶತಕ ಬಾರಿಸಿಬಿಟ್ಟರೆ ಆತ ವಿಶ್ವ ಶ್ರೇಷ್ಠ ಆಟಗಾರನಾಗಿಬಿಡುತ್ತಾನೆ ಮತ್ತು ಇಡೀ ಜಗತ್ತೇ ಆತನ ಕಡೆ ತಿರುಗಿ ನೋಡುತ್ತದೆ. ಅಂಥದ್ದರಲ್ಲಿ ಒಂದೇ ಬಾರಿಗೆ ತ್ರಿಶತಕ ಬಾರಿಸಿಬಿಟ್ಟರೆ ಹೇಗಿರಬೇಡ? ಏಕದಿನ ಪಂದ್ಯದಲ್ಲಿ ಆಟಗಾರನೊಬ್ಬ ತ್ರಿಶತಕ ಬಾರಿಸುವುದು ಅಸಾಧ್ಯ ಎಂಬ ಮಾತಿತ್ತು. ಆದರೆ, ಇನ್ನು ಮುಂದೆ ಆ ಮಾತನ್ನು ಆಡುವಂತಿಲ್ಲ. ಏಕೆಂದರೆ, ಭಾರತೀಯ ಮೂಲದ ಆಸ್ಟ್ರೇಲಿಯಾದ ಆಟಗಾರನೊಬ್ಬ ಏಕದಿನ ಪಂದ್ಯಗಳಲ್ಲಿ ಒಂದೇ ಬಾರಿಗೆ ತ್ರಿಶತಕ ಗಳಿಸಿದ್ದಾರೆ. ಆದರೆ, ಈ ದಾಖಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಾಗಿಲ್ಲ, ಬದಲಾಗಿ ಇದು ದೇಶೀಯ ಕ್ರಿಕೆಟ್‌ನಲ್ಲಿ ಈ ಅಪರೂಪದ ದಾಖಲೆ ಸೃಷ್ಟಿಯಾಗಿದೆ.

ಶನಿವಾರ (ಅ.04) ಪ್ಯಾಟರ್ನ್ ಪಾರ್ಕ್‌ನಲ್ಲಿ ಸಿಡ್ನಿ ಕ್ರಿಕೆಟ್ ಕ್ಲಬ್ ಮತ್ತು ವೆಸ್ಟರ್ನ್ ಸಬರ್ಬ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ, ವೆಸ್ಟರ್ನ್ ಸಬರ್ಬ್ಸ್ ತಂಡವನ್ನು ಪ್ರತಿನಿಧಿಸಿದ ಹರ್ಜಾಸ್ ಸಿಂಗ್ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ಮಾಡಿದರು. ಅಕ್ಷರಶಃ ಎದುರಾಳಿ ಬೌಲರ್‌ಗಳನ್ನು ಬೆಂಡತ್ತಿ, ಸಿಕ್ಸರ್​ಗಳ ಸುರಿಮಳೆಗೈದರು. ಕೇವಲ 74 ಎಸೆತಗಳಲ್ಲಿ ಶತಕ ಗಳಿಸಿದ ಹರ್ಜಾಸ್, ನಂತರ ಬಿರುಗಾಳಿಯ ಇನ್ನಿಂಗ್ಸ್ ಆಡಿ, ಕೇವಲ 67 ಎಸೆತಗಳಲ್ಲಿ 214 ರನ್ ಗಳಿಸಿದರು.

ಹರ್ಜಾಸ್​ ಅವರು ಕೇವಲ 141 ಎಸೆತಗಳಲ್ಲಿ 35 ಸಿಕ್ಸರ್‌ಗಳು ಮತ್ತು 14 ಬೌಂಡರಿಗಳನ್ನು ಒಳಗೊಂಡಂತೆ 314 ರನ್ ಗಳಿಸಿದರು. ಈ ಮೂಲಕ, ಗ್ರೇಡ್-ಲೆವೆಲ್ ಕ್ರಿಕೆಟ್‌ನಲ್ಲಿ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ತ್ರಿಶತಕ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು.

ಅಂದಹಾಗೆ, ಹರ್ಜಾಸ್ ಅವರ ಪಾಲಕರು ಭಾರತದ ಪಂಜಾಬ್‌ನಿಂದ ಬಂದವರು. ಅವರು 2000 ರಲ್ಲಿ ಚಂಡೀಗಢದಿಂದ ಸಿಡ್ನಿಗೆ ವಲಸೆ ಬಂದರು. ಹರ್ಜಾಸ್ ಅವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಜನಿಸಿದರು. ಹರ್ಜಾಸ್, ದಕ್ಷಿಣ ಆಫ್ರಿಕಾದಲ್ಲಿ ನಡೆದ 2024ರ ಅಂಡರ್-19 ವಿಶ್ವಕಪ್ ಮೂಲಕ ಬೆಳಕಿಗೆ ಬಂದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್​ ಪಂದ್ಯದಲ್ಲಿ ಅವರು 64 ಎಸೆತಗಳಲ್ಲಿ 55 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇನ್ನು ಹರ್ಜಾಸ್ ಅವರು ತ್ರಿಶತಕ ಸಾಧಿಸಿದ್ದಕ್ಕೆ ಬಹಳ ಖುಷಿಯಾಗಿದ್ದಾರೆ. ನನನೆ ಸ್ಫೋಟಕ ಇನ್ನಿಂಗ್ಸ್​ ಆಡುವುದೆಂದರೆ ತುಂಬಾ ಇಷ್ಟ. ಈ ಇನ್ನಿಂಗ್ಸ್ ನನ್ನ ವೃತ್ತಿಜೀವನದಲ್ಲಿ ಬಹಳ ವಿಶೇಷವಾಗಿ ಉಳಿಯುತ್ತದೆ ಎಂದು ಹೇಳಿದರು.

ಇನ್ನು ನ್ಯೂ ಸೌತ್ ವೇಲ್ಸ್ ಪ್ರೀಮಿಯರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ ಮೂವರು ಆಟಗಾರರ ಪಟ್ಟಿಯಲ್ಲಿ ಫಿಲ್ ಜಾಕ್ವೆಸ್ (321) ಮತ್ತು ವಿಕ್ಟರ್ ಟ್ರಂಪರ್ (335) ಬಳಿಕ ಹರ್ಜಾಸ್ ಅವರು ತಮ್ಮ ಹೆಸರನ್ನೂ ಸೇರಿಸಿಕೊಂಡಿದ್ದಾರೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟರ್ನ್ ಸಬರ್ಬ್ಸ್ ತಂಡವು ಹರ್ಜಾಸ್​ ಅವರ ಸ್ಫೋಟಕ ಬ್ಯಾಟಿಂಗ್​ ನೆರವನಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 483 ರನ್ ಗಳಿಸಿತು. ಬಳಿಕ ಗುರಿಯನ್ನು ಬೆನ್ನಟ್ಟಿದ ಸಿಡ್ನಿ ಕ್ರಿಕೆಟ್ ಕ್ಲಬ್, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 287 ರನ್ ಗಳಿಸಿತು. ಇದರೊಂದಿಗೆ ವೆಸ್ಟರ್ನ್ ಸಬರ್ಬ್ಸ್ ತಂಡವು 287 ರನ್​ಗಳ ಭರ್ಜರಿ ಜಯ ಗಳಿಸಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net