ಇದೇನಿದು ಟ್ವಿಸ್ಟ್​ ಮೇಲೆ ಟ್ವಿಸ್ಟ್​? ಕಿಚ್ಚ ಸುದೀಪ್ ಕೊಟ್ಟ ಸುಳಿವಿನಿಂದ ಸ್ಪರ್ಧೆಗಳ ಎದೆಯಲ್ಲಿ ಶುರುವಾಯ್ತು​ ಭಯ! Bigg Boss Kannada 12

Bigg Boss Kannada 12
Published on

Bigg Boss Kannada 12 : ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿಯಾಗಿರುವ ‘ಬಿಗ್​ಬಾಸ್ ಕನ್ನಡ ಸೀಸನ್ 12’ ಶುರುವಾಗಿ ಕೇವಲ ಒಂದು ವಾರ ಮಾತ್ರ ಕಳೆದಿದೆ. ಅಷ್ಟರಲ್ಲೇ ಮುಂದಿನ ದಿನಗಳಲ್ಲಿ ಮನೆಯೊಳಗೆ ಭಾರಿ ಬದಲಾವಣೆಗಳಾಗಲಿವೆ ಎಂಬ ಸುಳಿವನ್ನು ನಿರೂಪಕ ಕಿಚ್ಚ ಸುದೀಪ್​ ನೀಡಿದ್ದಾರೆ.

ಸೀಸನ್​ 12ರ ವಾರದ ಕತೆ ಕಿಚ್ಚ ಜತೆ ಮೊದಲ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಕ್ಲಾಸ್​ ತೆಗೆದುಕೊಂಡ ಸುದೀಪ್​ ಅನೇಕ ಕುತೂಹಲಕಾರಿ ವಿಚಾರಗಳನ್ನು ತಿಳಿಸಿದರು. ಮೊದಲ ವಾರದಲ್ಲಿ ಸ್ಪರ್ಧಿಗಳಿಂದ ನಿರೀಕ್ಷಿತ ಪ್ರದರ್ಶನ ಬಾರದ ಹಿನ್ನೆಲೆಯಲ್ಲಿ ಸುದೀಪ್​ ಅವರು ಸ್ಪರ್ಧಿಗಳಿಗೆ ಕೆಲವು ಎಚ್ಚರಿಕೆಗಳನ್ನು ನೀಡಿದರು.

ಈಗಾಗಲೇ ಒಂದು ವಾರ ಕಳೆದು ಹೋಗಿದೆ. ಆದರೆ, ಒಂದು ವಿಚಾರ ನಿಮಗೆ ಗೊತ್ತಿರಲಿ, ಬಿಗ್​ಬಾಸ್​ ಮನೆ ಒಳಗಿರುವ ಪ್ರತಿ ಒಂದು ನಿಮಿಷವು ಕೂಡ ತುಂಬಾ ಮುಖ್ಯವಾಗಿದೆ. ಇಲ್ಲಿ ವಿಶ್ರಾಂತಿ ಸಮಯ ಅನ್ನೋದೇ ಇಲ್ಲ. ನಾನು ಸುಮ್ಮನೇ ಒಂದು ಸುಳಿವು ಕೊಡುತ್ತಿದ್ದೇನೆ. ಈ ಸೀಸನ್​ನಲ್ಲಿ ನೀವು ನೋಡದೇ ಇರುವ ಎಲ್ಲವನ್ನು ನೀವು ನೋಡಬಹುದು. ಎರಡು ಫಿನಾಲೆ ಇರುವುದು ನಿಮಗೆಲ್ಲರಿಗೂ ಈಗಾಗಲೇ ಗೊತ್ತಿದೆ. ಅಲ್ಲದೆ, ಈ ಸೀಸನ್​ನಲ್ಲಿ ಎಷ್ಟು ಜನ ಬೇಕಾದರೂ ಹೋಗಬಹುದು ಮತ್ತು ಬರಬಹುದು. ಅಲ್ಲದೆ, ಮತ್ತೊಂದು ಸುಳಿವು ಕೊಡುತ್ತಿದ್ದೇನೆ. ನಿಮ್ಮಲ್ಲಿ ಕುಳಿತಿರುವ ಶೇ. 50 ರಷ್ಟು ಅಥವಾ ಅರ್ಧದಷ್ಟು ಜನರು ಮನೆಯಿಂದ ಹೊರ ಹೋಗಬಹುದು. ನಿಮಗೆ ಬದಲಿಯಾಗಿ ಕೆಲವರು ಮನೆಯೊಳಗೆ ಬರಬಹುದು ಎಂದರು.

ನೀವೆಲ್ಲ ಗುಂಪು ಗುಂಪಾಗಿ ಹೊರಗಡೆ ಹೋಗಬಹುದು. ಹನ್ನೊಂದು ಸೀಸನ್​ ಬೇರೆ ಆದರೆ, ಈ ಸೀಸನ್​ ಬೇರೆ ಎಂದು ಸುದೀಪ್​, ಪ್ರತಿಯೊಬ್ಬರಿಗೂ ನಾನು ಹೇಳುವುದು ಒಂದೇ ದಯವಿಟ್ಟು ತಯಾರಾಗಿ ಎಂದರು. ನೀವು ಹೊರಗಡೆ ಎಷ್ಟೇ ದೊಡ್ಡ ಹೀರೋ ಆಗಿರಬಹುದು, ಹೀರೋಯಿನ್​ ಆಗಿರಬಹುದು ಅಥವಾ ಏನೇ ಆಗಿರಬಹುದು ನೀವು ಮಹತ್ವದ ಬದಲಾವಣೆಯನ್ನು ನೋಡುತ್ತೀರಿ. ಇಲ್ಲಿ ಏನೇ ಬದಲಾವಣೆ ಆದರೂ ಅದಕ್ಕೆ ನೀವೇ ಕಾರಣರಾಗಿರುತ್ತೀರಿ ಎಂದರು. ಈ ಮೂಲಕ ಮುಂದಿನ ದಿನಗಳಲ್ಲಿ ಬಿಗ್​ಬಾಸ್​ ಮನೆಯೊಳಗೆ ಸ್ಪರ್ಧಿಗಳಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂಬ ಸುಳಿವನ್ನು ನೀಡಿದ್ದಾರೆ.

ಈ ಬಾರಿ ಎರಡು ಫೈನಲ್​

ಬಿಗ್​ಬಾಸ್​ಬಲ್ಲಿ ಈ ಬಾರಿ ಒಂದಲ್ಲ, ಎರಡು ಫೈನಲ್​ಗಳು ಇರಲಿವೆ. ಇದನ್ನು ಅಧಿಕೃತವಾಗಿ ಕಲರ್ಸ್​​ ಕನ್ನಡ ವಾಹಿನಿ ತಿಳಿಸಿದೆ. ಈ ಸೀಸನ್​ ಯಾರು ಗೆಲ್ತಾರೆ ಅಂತ ನೋಡುವುದಕ್ಕೆ 100 ದಿನಗಳು ಬೇಕಾಗಿಲ್ಲ, ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ. ನಿಮ್ಮಲ್ಲಿ ಯಾರು? ಯಾವಾಗ? ಹೇಗೆ ಬೇಕಾದರೂ ಎಲಿಮಿನೇಟ್​ ಆಗಬಹುದು. ಒಬ್ಬೊಬ್ಬರಾಗಿ ಹೋಗಬಹುದು ಅಥವಾ ಗುಂಪು ಗುಂಪಾಗಿ ಎಲಿಮಿನೇಟ್​ ಆಗಬಹುದು ಎಂದು ಬಿಗ್​ಬಾಸ್​ ಹೇಳಿದೆ. ಈ ಎಲ್ಲ ಕಾರಣಗಳಿಂದ ಈ ಬಾರಿ ಶೋ ಬಹಳ ಕುತೂಹಲ ಕೆರಳಿಸಿದೆ.

ಇನ್ನು ಡಬಲ್ ಫಿನಾಲೆ ಘೋಷಣೆಯು ಅಭಿಮಾನಿಗಳಲ್ಲಿ ಕುತೂಹಲ ಮತ್ತು ಉತ್ಸಾಹವನ್ನು ಹೆಚ್ಚಿಸಿದೆ. ವೀಕ್ಷಕರು ಹೆಚ್ಚಿನ ನಾಟಕ ಮತ್ತು ಮನರಂಜನೆಗಾಗಿ ಎದುರು ನೋಡುತ್ತಿರುವಾಗ ಸ್ಪರ್ಧಿಗಳು ಎರಡೆರಡು ಫೈನಲ್‌ಗಳಲ್ಲಿ ಬದುಕುಳಿಯಲು ಎಂದಿಗಿಂತಲೂ ಹೆಚ್ಚು ಕಾರ್ಯತಂತ್ರ ರೂಪಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಈ ಬಾರಿಯ ಶೋ ಆರಂಭದಲ್ಲೇ ಭಾರಿ ಕುತೂಹಲವನ್ನು ಹುಟ್ಟುಹಾಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net