

Cough Syrup : ಕೆಮ್ಮಿನ ಸಿರಪ್ ಸೇವಿಸಿ 11 ಮಕ್ಕಳು ದುರಂತ ಸಾವಿಗೀಡಾಗಿರುವ ಸುದ್ದಿ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಕೃತ್ಯಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂಬ ಒತ್ತಾಯಗಳು ಕೇಳಿಬರುತ್ತಿದ್ದು, ಇದರ ನಡುವೆ ಮಧ್ಯಪ್ರದೇಶದ ಛಿಂದ್ವಾರದಲ್ಲಿ ವೈದ್ಯರೊಬ್ಬರನ್ನು ಬಂಧಿಸಲಾಗಿದೆ.
ಮಕ್ಕಳಿಗೆ ಅಪಾಯಕಾರಿ ಕೆಮ್ಮಿನ ಸಿರಪ್ ಬರೆದಕೊಟ್ಟು ಆರೋಪದ ಮೇಲೆ ಭಾನುವಾರ (ಅ.05) ಮುಂಜಾನೆ ಡಾ. ಪ್ರವೀಣ್ ಸೋನಿ ಎಂಬ ಶಿಶುವೈದ್ಯನನ್ನು ಬಂಧಿಸಲಾಗಿದೆ. ಈತ ಪರಾಸಿಯಾ ನಿವಾಸಿ. ಸರ್ಕಾರಿ ವೈದ್ಯನಾಗಿದ್ದು, ತಮ್ಮ ಖಾಸಗಿ ಚಿಕಿತ್ಸಾಲಯಕ್ಕೆ ಬರುತ್ತಿದ್ದ ಮಕ್ಕಳಿಗೆ ಅಪಾಯಕಾರಿ ಕೋಲ್ಡ್ರಿಫ್ ಸಿರಪ್ ಬರೆದುಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಕ್ಕಳು ಸಾವಿಗೀಡಾದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮಧ್ಯಪ್ರದೇಶ ಸರ್ಕಾರ, ಕೋಲ್ಡ್ರಿಫ್ ಸಿರಪ್ ತಯಾರಕ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ವಿರುದ್ಧ ಪ್ರಕರಣ ದಾಖಲಿಸಿದೆ. ಈಗಾಗಲೇ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ಔಷಧದ ಮಾದರಿಗಳಲ್ಲಿ ಶೇ. 48.6 ರಷ್ಟು ಡೈಥಿಲೀನ್ ಗ್ಲೈಕೋಲ್ ಇತ್ತು. ಇದು ಅತ್ಯಂತ ವಿಷಕಾರಿ ವಸ್ತುವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈನ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಸರ್ಕಾರಿ ಔಷಧ ವಿಶ್ಲೇಷಕರು ಸಿರಪ್ ಮಾದರಿಯನ್ನು ಪರೀಕ್ಷಿಸಿದ ನಂತರ, ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶನಾಲಯವು ಅದನ್ನು ಗುಣಮಟ್ಟವಿಲ್ಲದ್ದು ಎಂದು ಘೋಷಿಸಿದೆ. ಈ ಸಂದರ್ಭದಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡು ಸರ್ಕಾರವು ಮತ್ತೊಂದು ಕೆಮ್ಮಿನ ಸಿರಪ್, ನೆಕ್ಸ್ಟ್ರೋ-ಡಿಎಸ್ ಮಾರಾಟವನ್ನು ನಿಷೇಧಿಸಿದೆ. ಕೋಲ್ಡ್ರಿಫ್‌ನ ಪರೀಕ್ಷಾ ವರದಿ ಶನಿವಾರ ಹೊರಬಂದಿದೆ. ಆದರೆ, ನೆಕ್ಸ್ಟ್ರೋ-ಡಿಎಸ್ ವರದಿ ಇನ್ನೂ ಬಂದಿಲ್ಲ.
ಸಂತ್ರಸ್ತರ ಕುಟುಂಬ ಸದಸ್ಯರು ನೀಡಿದ ವಿವರಗಳ ಪ್ರಕಾರ, ತಮ್ಮ ಮಕ್ಕಳು ಆರಂಭದಲ್ಲಿ ಶೀತ ಮತ್ತು ಸೌಮ್ಯ ಜ್ವರದಿಂದ ಬಳಲುತ್ತಿದ್ದರು. ಈ ಸಮಯದಲ್ಲಿ, ವೈದ್ಯರು ಅವರಿಗೆ ಕೆಮ್ಮಿನ ಸಿರಪ್ ಸೇರಿದಂತೆ ಸರಳ ಔಷಧಿಗಳನ್ನು ಸೂಚಿಸಿದರು. ನಂತರ, ಅವರು ಚೇತರಿಸಿಕೊಂಡಂತೆ ತೋರುತ್ತಿತ್ತು ಆದರೆ, ಅದೇ ಲಕ್ಷಣಗಳು ಮತ್ತೆ ಕಾಣಿಸಿಕೊಂಡವು. ಅವರ ಮೂತ್ರ ವಿಸರ್ಜನೆಯಲ್ಲಿಯೂ ವ್ಯತ್ಯಾಸವಿತ್ತು. ಇದಾದ ಬಳಿಕ ಮಕ್ಕಳ ಸ್ಥಿತಿ ಹದಗೆಟ್ಟಿತು ಮತ್ತು ಅದು ಮೂತ್ರಪಿಂಡದ ಸೋಂಕಾಗಿ ಬದಲಾಯಿತು. ಇದಾದ ನಂತರ, ಮಕ್ಕಳು ಮೃತಪಟ್ಟರು ಎಂದು ಹೇಳಿದ್ದಾರೆ.
ಮೃತ ಮಕ್ಕಳ ಮೂತ್ರಪಿಂಡದ ಬಯಾಪ್ಸಿ ಮಾಡಿದಾಗ ವಿಷಕಾರಿ ಡೈಥಿಲೀನ್ ಗ್ಲೈಕೋಲ್ ಇರುವಿಕೆಯನ್ನು ಬಹಿರಂಗವಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಈ ಸಾವುಗಳನ್ನು ಅತ್ಯಂತ ದುರಂತ ಎಂದು ಕರೆದಿದ್ದಾರೆ. ಅಲ್ಲದೆ, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಇನ್ನು ಮಧ್ಯಪ್ರದೇಶದಾದ್ಯಂತ ಈ ಸಿರಪ್ ಮಾರಾಟವನ್ನು ನಿಷೇಧಿಸಲಾಗಿದೆ ಮತ್ತು ಸಿರಪ್ ಉತ್ಪಾದನಾ ಕಂಪನಿಯ ಇತರ ಉತ್ಪನ್ನಗಳ ಮೇಲೆಯೂ ನಿಷೇಧ ಹೇರಲಾಗುವುದು ಎಂದು ಸಿಎಂ ಮೋಹನ್ ಯಾದವ್ ಹೇಳಿದ್ದಾರೆ. (ಏಜೆನ್ಸೀಸ್)