ಜಗದಲ್ಲಿ ರೈತನೆಂಬ ಬ್ರಹ್ಮ … ಸಂಕ್ರಾಂತಿಗೆ ಬಂತೊಂದು ರೈತ ಗೀತೆ

Prajarajya 2
Published on

ಬೆಂಗಳೂರು: 'ಪ್ರಜಾರಾಜ್ಯ' ಚಿತ್ರದ ಎಲೆಕ್ಷನ್​ ಹಾಡೊಂದನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಯೋಗರಾಜ್​ ಭಟ್​ ಬರೆದ ಸಾಹಿತ್ಯಕ್ಕೆ, ಉಪೇಂದ್ರ ಧ್ವನಿಯಾಗಿದ್ದರು. ಈಗ ಅದೇ ಚಿತ್ರದಿಂದ ಇನ್ನೊಂದು ಹೊಸ ಹಾಡು ಬಿಡುಗಡೆಯಾಗಿದೆ. ಅದೇ 'ಜಗದಲ್ಲಿ ರೈತನೆಂಬ ಬ್ರಹ್ಮ ...'.

ಇದೊಂದು ರೈತಗೀತೆಯಾಗಿದ್ದು, ಸಂಕ್ರಾಂತಿ ಹಬ್ಬದ ಪ್ರಯುಕ್ತ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿದೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಶಂಕರ್ ಮಹದೇವನ್ ಧ್ವನಿಯಾಗಿದ್ದಾರೆ. ಈ ಹಾಡನ್ನು ಇತ್ತೀಚೆಗೆ ಹಿರಿಯ ನಟ-ನಿರ್ದೇಶಕ ಟಿ.ಎಸ್​. ನಾಗಾಭರಣ ಬಿಡುಗಡೆ ಮಾಡಿದ್ದಾರೆ. ಆಷ್ಟೇ ಅಲ್ಲ, ಈ ಹಾಡಿನಲ್ಲಿ ಅವರೇ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ.

ಈ ಹಾಡಿನ ಕುರಿತು ಮಾತನಾಡಿರುವ ಅವರು, 'ರೈತ ಗೀತೆಗಳು ನಮಗೆಲ್ಲ ಹೊಸದಲ್ಲ. ಕುವೆಂಪು ಮಾದರಿ ಕಲ್ಪಿಸಿ ಕೊಟ್ಟಿದ್ದಾರೆ. ಈ ಚಿತ್ರದ ರೈತ ಗೀತೆಯಲ್ಲಿ ಹೊಸದನ್ನು ಹುಟ್ಟುಹಾಕುವ ಪ್ರಯತ್ನವನ್ನು ನಾಗೇಂದ್ರ ಪ್ರಸಾದ್ ಚನ್ನಾಗಿ ಮಾಡಿದ್ದಾರೆ. ರೈತರು ಬೆಳೆದ ಬೆಳೆಗಳ ಬೇಲೆಗಿಂತ ಮಾರಾಟ ಮಾಡುವ ಮದ್ಯವರ್ತಿಗಳಿಗೆ ಬೇಡಿಕೆ ಇದ್ದು ಜಾಗತಿಕ ಮಾರುಕಟ್ಟೆ ಹುನ್ನಾರ ನಡೆದಿದೆ. ಕೃಷಿ ಹಾಳಾದ್ರೆ ಎನಾಗುತ್ತೆ ಎನ್ನುವುದಕ್ಕೆ ಇಂದು ಪಾಕಿಸ್ತಾನ ಒಂದು ಉತ್ತಮ ಉದಾಹರಣೆ. ಆಧುನಿಕ ಗೊಬ್ಬರ ಔಷಧಿ ಹಾಕಿ ಇಂದು ನಾವು ಮತ್ತೆ ಸಾವಯವ ಕೃಷಿಯ ಕಡೆ ಬರತಾ ಇದ್ದೇವೆ. ಟ್ರ್ಯಾಕ್ಟರ್ ಬಂದಮೇಲೆ ಎತ್ತುಗಳು ಕಡಿಮೆ ಆಗಿವೆ. ಆ ಅನುಭವನ್ನು ಜನರಿಗೆ ತಲುಪಿಸುವ ಪ್ರಯತ್ನ ಈ ತಂಡ ಮಾಡಿದೆ. ಪ್ರಜೆಗಳಿಗೆ ಮುಖ್ಯವಾಗಿ ಇರಬೇಕಾದ ಅಂಶದ ಮೇಲೆ ಈ ಸಿನಿಮಾ ಮಾಡಲಾಗಿದೆ. ಹೊಸತನವನ್ನು ಹುಡುಕುತ್ತಾ ಮುಂದೆ ಬಂದಿದೆ 'ಪ್ರಜಾರಾಜ್ಯ' ತಂಡ. ಈ ಸಿನಿಮಾ ಪ್ರಜೆಗಳಿಗೆ ತಲುಪಬೇಕು' ಎಂದರು.

ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರುವ ಡಾ. ವರದಾಜು ಮಾತನಾಡಿ, 'ನಾನು ವೃತ್ತಿಯಲ್ಲಿ ಡಾಕ್ಟರ್ ಆಗಿದ್ದರೂ ನನ್ನ ಮೂಲ ಕೃಷಿ. ಇಂದು ದೇಶ ಕಾಪಾಡುತ್ತಾ ಇರುವುದು ಕೃಷಿ ಹಾಗೂ ರೈತ. ಆ ರೈತರಿಗೆ ಈ ಹಾಡು ಸಮರ್ಪಣೆ. ಹಾಗಾಗಿ ನಾವು ಈ ಗೀತೆಯನ್ನು ರೈತರ ಹಬ್ಬವಾದ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಮಾಡುತ್ತಿದ್ದೇವೆ' ಎಂದರು.

'ಪ್ರಜಾರಾಜ್ಯ' ಚಿತ್ರದಲ್ಲಿ ದೇವರಾಜ್, ಸುಧಾ ಬೆಳವಾಡಿ, ಟಿ.ಎಸ್. ನಾಗಾಭರಣ, ಅಚ್ಚುತ್ ಕುಮಾರ್, ತಬಲಾ ನಾಣಿ, ಸುಧಾರಾಣಿ ಮುಂತಾದವರು ಇದ್ದಾರೆ. ಚಿತ್ರಕ್ಕೆ ವಿಜೇತ ಮಂಜಯ್ಯ ಅವರ ಸಂಗೀತ, ರಾಕೇಶ್ ತಿಲಕ್ ಛಾಯಾಗ್ರಹಣವಿದ್ದು, ವಿಜಯ್​ ಭಾರ್ಗವ ಈ ಚಿತ್ರದಲ್ಲಿ ನಟಿಸುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net