'ಮೊದಲ ಮಳೆ' ಸುರಿಸಲು ಹೊರಟ ನಾಯಕನಿಗೆ 9 ನಾಯಕಿಯರು!

Modala Male
Published on

ಬೆಂಗಳೂರು: ಒಂದು ಚಿತ್ರದಲ್ಲಿ ಒಬ್ಬ ನಾಯಕನಿಗೆ ಒಬ್ಬ ನಾಯಕಿ ಇರುವುದು ಸಹಜ. ಕೆಲವೊಮ್ಮೆ ಇಬ್ಬರು, ಮೂವರು, ನಾಲ್ವರು ಸಹ ಇರಬಹುದು. ಆದರೆ, ಈ ಚಿತ್ರದಲ್ಲಿ ನಾಯಕನಿಗೆ ಒಂಬತ್ತು ನಾಯಕಿಯರಂತೆ. ಅವರ ಪೈಕಿ, ಆತ ಯಾರನ್ನು ಮದುವೆಯಾಗುತ್ತಾನೆ ಎಂಬುದೇ ಚಿತ್ರದ ಕಥೆ.

ಅಂದಹಾಗೆ, ಈ ಚಿತ್ರದ ಹೆಸರು 'ಮೊದಲ ಮಳೆ'. ಯಾವ ಹುಡುಗಿಯೂ ಇಷ್ಟಪಡದಂಥ ಹುಡುಗನೊಬ್ಬ ಮದುವೆಯಾಗಲು ಹೊರಟಾಗ ಏನೆಲ್ಲಾ ಆಗುತ್ತದೆ ಎಂದು ಹೇಳುವ ಕಥೆಯೇ 'ಮೊದಲ ಮಳೆ'. ಹಾಗಂತ ಇದು ಬರೀ ಕಾಮಿಡಿ ಚಿತ್ರವಲ್ಲ. ಇದರಲ್ಲಿ ಮರ್ಡರ್ ಮಿಸ್ಟ್ರಿ, ಹಾರರ್ ಮುಂತಾದ ಅಂಶಗಳೂ ಇವೆ. ಈ ಚಿತ್ರದಲ್ಲಿ ನಾಯಕನಾಗಿ ರಾಜಾನರಸಿಂಹ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಿರ್ಮಾಪಕರೂ ಅವರೇ. 'ನಾನೊಬ್ಬ ರೈತನ ಮಗ. ನಟ ಆಗಬೇಕು ಎನ್ನುವುದು ನನ್ನ ಕನಸು. ಒಂದು ಸಿನಿಮಾ ಮಾಡಲು ಹೋಗಿ ಮೋಸಹೋದೆ. ಈಗ ನಾನೇ ನಿರ್ಮಾಪಕ ಹಾಗೂ ನಾಯಕನಾಗಿ ಈ ಚಿತ್ರ ಮಾಡಿದ್ದೇನೆ. ಏನೋ ಸಾಧನೆ ಮಾಡಲು ಹಳ್ಳಿಯಿಂದ ಬಂದ ಜವರಾಯ ಕೊನೆಗೆ ಏನಾದ ಎನ್ನುವುದೇ ಈ ಚಿತ್ರದ ಕಥೆ' ಎಂದು ಚಿತ್ರದ ಬಗ್ಗೆ ಮಾತನಾಡುತ್ತಾರೆ.

ಈ ಚಿತ್ರಕ್ಕೆ ರಾಜಶರಣ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಕುರಿತು ಮಾತನಾಡುವ ರಾಜಶರಣ್​, 'ರಾಜಾನರಸಿಂಹ ಮತ್ತು ನಾನು ಸುಮಾರು ಐದು ವರ್ಷಗಳ ಸ್ನೇಹಿತರು. ಅವರಿಗಾಗಿಯೇ ಒಂದು ಕಥೆ ಮಾಡಿದೆ, ಆ ಚಿತ್ರ ಆಗಲಿಲ್ಲ, ಅವರುಗೇನು ೧೦ ಜನ ಹೀರೋಯಿನ್ ಇಟ್ಕೊಂಡು ಸಿನಿಮಾ ಮಾಡಕ್ಕಾಗುತ್ತಾ ಎನ್ನುವ ಮಾತು ಬಂತು. ಯಾಕಾಗಲ್ಲ ಅಂತ ಚಾಲೆಂಜ್ ತಗೊಂಡು ಈ ಚಿತ್ರ ಮಾಡಿದ್ದೇನೆ. ವ್ಯಕ್ತಿಯ ಜೀವನದಲ್ಲಿ ಮದುವೆ ಎನ್ನುವುದು ಮೊದಲ ಮಳೆ ಇದ್ದಹಾಗೆ, ನಾಯಕನ ಲೈಫ್ನಲ್ಲೂ ಮೊದಲ ಮಳೆ ಆಗುತ್ತಾ ಇಲ್ವಾ ಅನ್ನೋದೇ ಈ ಚಿತ್ರದ ಕಥೆ. ಮಡಿಕೇರಿ, ಸಕಲೇಶಪುರ, ಮೈಸೂರು, ಬೆಂಗಳೂರು ಸುತ್ತಮುತ್ತ ೪೦ ದಿನ ಚಿತ್ರೀಕರಣ ನಡೆಸಿದ್ದೇವೆ' ಎನ್ನುತ್ತಾರೆ.

ಈ ಚಿತ್ರದಲ್ಲಿ ರಾಜನರಸಿಂಹಗೆ ಮಮತಾ ಗೌಡ, ಸಾಹಿತ್ಯ, ಉಷಾ, ಪ್ರಿಯಾಶೆಟ್ಟಿ, ಸೇರಿದಂತೆ 9 ನಾಯಕಿಯರು ಅಭಿನಯಿಸಿದ್ದು ಮಿಕ್ಕಂತೆ ಜ್ಯೋತಿ ಮರೂರು, ಗಣೇಶ್​ ರಾವ್​ ಕೇಸರ್ಕರ್​ ಸೇರಿದಂತೆ ಹಲವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net