ನಿಮ್ಮ ಫೋಟೋ ನನ್ನ ಆಟೋದಲ್ಲಿ ಏಕಿದೆ ಗೊತ್ತಾ? ಅನುಪಮಾ ವಿರುದ್ಧ ರೊಚ್ಚಿಗೆದ್ದ ಅಭಿಮಾನಿ!

Anupama Fan
Published on

ಹೈದರಾಬಾದ್​​: ಅಶ್ಲೀಲತೆಗೆ ಅವಕಾಶ ನೀಡದೆ ಇದುವರೆಗೂ ಸಾಂಪ್ರದಾಯಿಕ ಪಾತ್ರಗಳಲ್ಲಿ ನಟಿಸುತ್ತಾ ಎಲ್ಲರ ಮನ ಗೆದ್ದಿದ್ದ ನಟಿ ಅನುಪಮಾ ಪರಮೇಶ್ವರನ್​ ಇದೀಗ ಬೋಲ್ಡ್​ ಅವತಾರ ತಾಳಿದ್ದಾರೆ. ಅನುಪಮಾರನ್ನು ಆರಾಧಿಸುತ್ತಿದ್ದ ಅಭಿಮಾನಿಗಳು ಆಕೆಯ ಅರೆಬರೆ ಅವತಾರ ಕಂಡು ಅಸಮಾಧಾನಗೊಂಡಿದ್ದಾರೆ. ಇದೀಗ ಅವರ ಅಭಿಮಾನಿಯೊಬ್ಬ ವಿಡಿಯೋ ಹರಿಬಿಡುವ ಮೂಲಕ ಅನುಪಮಾರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಭಿಮಾನಿ ಆಟೋ ಚಾಲಕನಾಗಿದ್ದು, ತಮ್ಮ ಆಟೋದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿರುವ ಅನುಪಮಾ ಫೋಟೋವನ್ನು ಅಂಟಿಸಿಕೊಂಡಿದ್ದಾರೆ. ಅದರ ಮುಂದೆ ಕುಳಿತು ಅಭಿಮಾನಿ ವಿಡಿಯೋ ಮಾಡಿದ್ದಾರೆ. ಅನುಪಮಾ ಗಾರು ನಿಮ್ಮ ಫೋಟೋವನ್ನು ನನ್ನ ಆಟೋದಲ್ಲಿ ಏಕೆ ಹಾಕಿಕೊಂಡಿದ್ದೇನೆ ಎಂಬುದು ನಿಮಗೆ ಗೊತ್ತಾ? ಈ ಹಿಂದೆ ನೀವು ಎಂಥೆಂತ ಸಿನಿಮಾಗಳನ್ನು ಮಾಡಿದ್ದೀರಿ, ಆದರೆ, ಈಗ ನಿಮ್ಮ ಅವತಾರವನ್ನು ನೋಡಿ ಬೇಸರಗೊಂಡಿದ್ದೇವೆ. ಪ್ರೇಮಂ, ಆಹಾ, ಶತಮಾನಂಭವತಿ ಇವೆಲ್ಲಾ ಎಂಥಾ ಸಿನಿಮಾ. ನಿಮ್ಮನ್ನು ನೋಡಿದರೆ ಕೈಮುಗಿಯಬೇಕು ಅನಿಸುತ್ತದೆ. ಆದರೆ, ನೀವಿಗ ರೌಡಿ ಬಾಯ್ಸ್​ ಮತ್ತು ಟಿಲ್ಲು ಸ್ಕ್ವೇರ್​ ಸಿನಿಮಾಗಳಲ್ಲಿ ಯಾವ ರೀತಿ ನಟಿಸಿದ್ದೀರಿ, ನಿಮ್ಮ ಅವತಾರವನ್ನು ನೋಡಿ ನಿಜಕ್ಕೂ ಬೇಸರವಾಗುತ್ತದೆ ಎಂದು ಅಭಿಮಾನಿ ಹೇಳಿದ್ದಾರೆ. ಇದೀಗ ಈ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಆಲ್ಫೋನ್ಸ್​ ಪುತ್ರೆನ್​ ನಿರ್ದೇಶನದ ಪ್ರೇಮಂ ಸಿನಿಮಾದಲ್ಲಿ ಅನುಪಮಾ ಹೆಸರು ಮೊದಲು ಕೇಳಿಬಂದಿತು. ಮೊದಲ ಚಿತ್ರವೇ ಬ್ಲಾಕ್​ಬಸ್ಟರ್​ ಹಿಟ್​ ಆದರೂ ಕೂಡ ಅವರ ಸಿನಿ ಜರ್ನಿಯಲ್ಲಿ ಅಷ್ಟೊಂದು ಯಶಸ್ಸು ಸಿಗಲಿಲ್ಲ. ಸಾಕಷ್ಟು ಸಿನಿಮಾಗಳು ಫ್ಲಾಪ್​ ಆದವು. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಮಿಂಚಿರುವ ಅನುಪಮಾ, ಪುನೀತ್​ ರಾಜ್​ಕುಮಾರ್​ ಅಭಿನಯದ ನಟಸಾರ್ವಭೌಮ ಸಿನಿಮಾದಲ್ಲೂ ನಟಿಸುವ ಮೂಲಕ ಅನುಪಮಾ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ತಮ್ಮ ಸಹಜ ಸೌಂದರ್ಯದಿಂದಲೇ ಅನುಪಮಾ ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇದುವರೆಗೂ ಹೆಚ್ಚೇನು ಬೋಲ್ಡ್​ ಪಾತ್ರಗಳಲ್ಲಿ ನಟಿಸದ ಅನುಪಮಾ ಇದೇ ಮೊದಲ ಬಾರಿಗೆ ತುಂಬಾ ಬೋಲ್ಡ್​ ಆಗಿ ನಟಿಸುವ ಮೂಲಕ ಹೊಸ ಅವತಾರದೊಂದಿಗೆ ರೀಎಂಟ್ರಿ ಕೊಟ್ಟಿದ್ದಾರೆ. ದೀರ್ಘ ಕಾಲದ ಲಿಪ್​ಲಾಕ್ ದೃಶ್ಯ​, ತುಂಡುಡುಗೆ ಹಾಗೂ ಸೆಕ್ಸ್ ಡೈಲಾಗ್​ ಸೇರಿದಂತೆ ಹೊಸ ಪ್ರಯತ್ನಕ್ಕೆ ಅನುಪಮಾ ಕೈಹಾಕಿದ್ದು, ಈ ಬಾರಿ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

ಅಂದಹಾಗೆ ಟಿಲ್ಲು ಸ್ಕ್ವೇರ್​ ಸಿನಿಮಾ ಮಾರ್ಚ್​ 29ರಂದು ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಮಲಿಕ್​ ರಾಮ್​ ನಿರ್ದೇಶನ ಮಾಡಿದ್ದಾರೆ. ಅನುಪಮಾ ಅವರು ಜಯಂ ರವಿ ನಟನೆಯ ಸೈರೆನ್​ ಸಿನಿಮಾದಲ್ಲಿಯೂ ನಟಿಸಿದ್ದು, ಈ ಚಿತ್ರವು ಸಹ ಬಿಡುಗಡೆಗೆ ಸಜ್ಜಾಗಿದೆ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net