

ನೋಯ್ಡಾ: ಆತಂಕಕಾರಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕಮಲ್ನಾಥ್ ಅವರ ಸೋದರಸಂಬಂಧಿ ಮತ್ತು ಅವರ ಪತ್ನಿಯನ್ನು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ನಿವಾಸದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಶುಕ್ರವಾರ ಘಟನೆ ನಡೆದಿದ್ದು, ಮೃತಪಟ್ಟವರನ್ನು ನರೇಂದ್ರ ನಾಥ್ (70), ಪತ್ನಿ ಸುಮನ್ (65) ಎಂದು ಗುರುತಿಸಲಾಗಿದೆ. ನರೇಂದ್ರ ಅವರು ಕಮಲ್ನಾಥ್ ಅವರ ಸೋದರಸಂಬಂಧಿ. ಮನೆಯ ಬೇಸ್ಮೆಂಟ್ನಲ್ಲಿರುವ ಬಟ್ಟೆಗಳ ರಾಶಿಯಲ್ಲಿ ನರೇಂದ್ರ ಅವರ ಮೃತದೇಹ ಪತ್ತೆಯಾಗಿದ್ದು, ಅವರ ಪತ್ನಿ ಸುಮನ್ ಅವರ ದೇಹ ಮೊದಲನೇ ಮಹಡಿಯ ಡ್ರಾಯಿಂಗ್ ರೂಮ್ನಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ.
ಅಪರಿಚಿತ ದುಷ್ಕರ್ಮಿಗಳು ನರೇಂದ್ರ ಅವರ ಕತ್ತು ಹಿಸುಕುವ ಮೊದಲು ಅವರನ್ನು ಕಟ್ಟಿಹಾಕಿ, ಮೊಂಡಾದ ವಸ್ತುವಿನಿಂದ ಕ್ರೂರವಾಗಿ ಹಿಂಸಿಸಿದ್ದು, ಗಾಯದ ಕಲೆಗಳು ಪತ್ತೆಯಾಗಿವೆ. ಸುಮನ್ ಅವರಿಗೆ ಹಿಗ್ಗಾಮುಗ್ಗ ಥಳಿಸಿ, ಎದೆಯ ಎಡಭಾಗಕ್ಕೆ ಗುಂಡು ಹಾರಿಸಿದ್ದಾರೆ.
ಗ್ರೇಟರ್ ನೋಯ್ಡಾದ ಆಲ್ಫಾ 2 ಸೆಕ್ಟರ್ನಲ್ಲಿರುವ ಮೂರು ಅಂತಸ್ತಿನ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನರೇಂದ್ರ ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ಪೇರ್ ಪಾರ್ಟ್ ವ್ಯವಹಾರ ಮಾಡುತ್ತಿದ್ದರು. ಅಲ್ಲದೆ, ಹಣ ಸಾಲ ನೀಡುತ್ತಿದ್ದರು. ಪರಿಚಯಸ್ಥರು ಮತ್ತು ಅಕ್ಕಪಕ್ಕದ ವ್ಯಾಪಾರಿಗಳು ನರೇಂದ್ರ ಅವರಿಂದ ಸಾಲ ಪಡೆದುಕೊಳ್ಳುತ್ತಿದ್ದರು. ಸುಮನ್ ಅವರು ದೆಹಲಿ ಮೂಲದ ಎನ್ಜಿಒದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದರು.
ನರೇಂದ್ರ ಅವರು ಆಗಾಗ ತಮ್ಮ ಬೇಸ್ಮೆಂಟ್ನಲ್ಲಿ ಸ್ಥಳೀಯ ವ್ಯಾಪಾರಿಗಳು, ಮೇಸನ್ಸ್ ಮತ್ತು ಎಲೆಕ್ಟ್ರಿಷಿಯನ್ಗಳನ್ನು ಭೇಟಿ ಮಾಡುತ್ತಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ ಪಾರ್ಟಿಗೆಂದು ನರೇಂದ್ರ ಅವರು ಕೆಲವರನ್ನು ಮನೆಗೆ ಆಹ್ವಾನಿಸಿದ್ದರಂತೆ. ಬೇಸ್ಮೆಂಟ್ನಲ್ಲಿ ವೈನ್ ಗ್ಲಾಸ್, ಲಿಕ್ಕರ್ ಬಾಟಲ್ಸ್, ಮೊಮೊಸ್, ನೂಡಲ್ಸ್ ಮತ್ತು ಸಿಗರೇಟ್ ಹಾಗೂ ಬೀಡಿಗಳು ಬಿದ್ದಿರುವುದನ್ನು ತನಿಖಾಗಾರರು ಗಮನಿಸಿದ್ದಾರೆ.
ಅಲ್ಲದೆ, ಗುರುವಾರ ರಾತ್ರಿ ಸುಮನ್ ಅವರು ತಮ್ಮ ಮಗಳಿಗೆ ಫೋನ್ ಮಾಡಿ ಬೇಸ್ಮೆಂಟ್ನಲ್ಲಿ ಪಾರ್ಟಿ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಅದು ಆಕೆಗೆ ಇಷ್ಟವಿಲ್ಲದಿರುವುದಾಗಿಯು ತಿಳಿಸಿದ್ದಾರೆ. ಆದರೆ, ಬೆಳಗಾಗುವಷ್ಟರಲ್ಲಿ ನರೇಂದ್ರ ಮತ್ತು ಪತ್ನಿ ಸುಮನ್ ಬರ್ಬರವಾಗಿ ಹತ್ಯೆಯಾಗಿರುವುದು ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)