ನವದೆಹಲಿ: ಸೆಪ್ಟೆಂಬರ್ 19ರಂದು ಬಾಂಗ್ಲಾದೇಶ ವಿರುದ್ಧ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಈಗಾಗಲೇ ತಂಡವನ್ನು ಪ್ರಕಟಿಸಲಾಗಿದ್ದು, ಆಟಗಾರರು ಸಿದ್ಧತೆಯನ್ನು ಆರಂಭಿಸಿದ್ದಾರೆ. ಈಗಾಗಲೇ ತಂಡದಲ್ಲಿ ಸ್ಥಾನ ಪಡೆದಿರುವ ಬಹುತೇಕ ಆಟಗಾರರು ದುಲೀಪ್ ಟ್ರೋಫಿಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದು, ಆರ್ಸಿಬಿ ತಂಡದ ಸ್ಟಾರ್ ವೇಗಿ ಯಶ್ ದಯಾಳ್ಗೆ ರಾಷ್ಟ್ರೀಯ ತಂಡದಿಂದ ಕರೆ ಬಂದಿದೆ. ಈ ಕುರಿತು ಆರಂಭಿಕ ಆಟಗಾರ ಶುಭಮನ್ ಗಿಲ್ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಶುಭಮನ್, ಬಾಂಗ್ಲಾದೇಶ ವಿರುದ್ಧ ಮುಂಬರುವ ಟೆಸ್ಟ್ ಸರಣಿಯು ಆಸಕ್ತಿದಾಯಕ ಮತ್ತು ಕುತೂಹಲಕಾರಿ ಸ್ಪರ್ಧೆಯಾಗಿ ರೂಪುಗೊಳ್ಳುತ್ತದೆ. ಯಾವುದೇ ತಂಡವನ್ನು ನಾವು ಸುಮ್ಮನೆ ಅಂದಾಜಿಸುವಂತಿಲ್ಲ. ಕಳೆದೆರಡು ತಿಂಗಳಲ್ಲಿ ಬಾಂಗ್ಲಾದೇಶದ ಪ್ರದರ್ಶನ ನೋಡಿದರೆ ನಮಗೆ ಎಲ್ಲವೂ ತಿಳಿಯುತ್ತದೆ. ಪಾಕಿಸ್ತಾನದಲ್ಲಿ ಅವರು ಆಡಿದಂತಹ ರೀತಿಯೇ ಇದಕ್ಕೆ ಉತ್ತಮ ಸಾಕ್ಷಿಯಾಗಿದೆ.
ಇದನ್ನೂ ಓದಿ: VIDEO| ಆರ್ಸಿಬಿ ನಾಯಕ ಯಾರು… ಕನ್ನಡಿಗನ ಪರ ಚಿನ್ನಸ್ವಾಮಿಯಲ್ಲಿ ಮೊಳಗಿತು ಜಯಘೋಷ
ಬಾಂಗ್ಲಾದ ಬೌಲರ್ಗಳು ಹಾಗೂ ಅವರ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ಒತ್ತಡವನ್ನು ನಿಭಾಯಿಸುವ ರೀತಿ ನೋಡಿದರೆ ಯಾರನ್ನು ನಾವು ಕಡೆಗಣಿಸುವಂತಿಲ್ಲ. ನಾನು ಮೂರನೇ ಕ್ರಮಾಂಕದಲ್ಲಿ ಆಡಿದ ಆರಂಭಿಕ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾನು ಉತ್ತಮ ಆರಂಭಗಳನ್ನು ಪಡೆಯುತ್ತಿದ್ದೆ, 20 ಮತ್ತು 30 ರನ್ಗಳನ್ನು ಬೇಗನೆ ಗಳಿಸುತ್ತಿದ್ದೆ. ಆದರೆ, ಅದನ್ನು ದೊಡ್ಡ ಮೊತ್ತವಾಗಿ ಪರಿಗಣಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಅದನ್ನೇ ಹಿಂತಿರುಗಿ ನೋಡಿದಾಗ ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ನಂಬಲು ಸಾಧ್ಯವಾಗಲಿಲ್ಲ.
ನಾನು ಹಿಂದೆಂದೂ ಐದು ಟೆಸ್ಟ್ ಪಂದ್ಯಗಳನ್ನು ಆಡಿರಲಿಲ್ಲ, ಆದ್ದರಿಂದ ಆ ತೀವ್ರತೆಯನ್ನು ಅನುಭವಿಸುವುದು ಉತ್ತಮ ಅನುಭವ ಮತ್ತು ರೋಮಾಂಚನಕಾರಿಯಾಗಿದೆ. ಎರಡು ಟೆಸ್ಟ್ ಪಂದ್ಯಗಳ ನಂತರ ಬ್ರೇಕ್ ಪಡೆದ ನಂತರವೂ ನಾವು ಆ ತೀವ್ರತೆಯನ್ನು ಎಂದಿಗೂ ಕೈಬಿಡಲಿಲ್ಲ ಎಂದು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶುಭಮನ್ ಗಿಲ್ ಹೇಳಿದ್ದಾರೆ.