ಬೆಂಗಳೂರು: ಬಾಂಗ್ಲಾದೇಶ ಸೇರಿದಂತೆ ಮುಂಬರುವ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಇರಾದೆಯೊಂದಿಗೆ ದುಲೀಪ್ ಟ್ರೋಫಿಯಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಬ್ಯಾಟರ್ಗಳು ಸಿಡಿಲಬ್ಬರದ ಆಟವಾಡುವ ಮೂಲಕ ಆಯ್ಕೆಗಾರರ ಗಮನ ಸೆಳೆಯುತ್ತಿದ್ದಾರೆ. ಸೆಪ್ಟೆಂಬರ್ 05ರಿಂದ ಆರಂಭವಾಗಿರುವ ಮೊದಲ ಪಂದ್ಯ ಭಾರತ ಎ ಮತ್ತು ಭಾರತ ಬಿ ತಂಡಗಳ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಈಗಾಗಲೇ ಈ ಪಂದ್ಯದಲ್ಲಿ ಉಭಯ ತಂಡಗಳೂ ಮೊದಲ ಇನ್ನಿಂಗ್ಸ್ ಮುಗಿಸಿದ್ದು, ಇದೀಗ ಎರಡನೇ ಇನ್ನಿಂಗ್ಸ್ ಕೂಡ ಚಾಲ್ತಿಯಲ್ಲಿದ್ದು, ಕನ್ನಡಿಗ ಕೆ.ಎಲ್. ರಾಹುಲ್ ಶುಭಮನ್ ಗಿಲ್ ನೇತೃತ್ವದ ಭಾರತ ಎ ತಂಡದ ಪರ ಆಡುತ್ತಿದ್ದಾರೆ. ಕ್ರೀಡೆ ಎಂದಮೇಲೆ ಮೈದಾನದ ಒಳಗೋ ಅಥವಾ ಹೊರಗೋ ಪ್ರತಿ ಒಂದು ಪಂದ್ಯವು ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾಗುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೂಡ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮಕ್ಕಳ ಸಾವಲ್ಲೂ ಸಾರ್ಥಕರೆ ಮೆರೆದ ಪೋಷಕರು; ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕರ ನೇತ್ರದಾನ
ದುಲೀಪ್ ಟ್ರೋಫಿಯಲ್ಲಿ ಭಾರತ ಎ ಪರ ತವರು ನೆಲದಲ್ಲಿ ಆಡುತ್ತಿರುವ ಕನ್ನಡಿಗ ಕೆ.ಎಲ್. ರಾಹುಲ್ಗೆ ಅಭಿಮಾನಿಗಳಿಂದ ಭರ್ಜರಿ ಬೆಂಬಲ ದೊರೆತಿದೆ. ರಾಹುಲ್ ಮೈದಾನಕ್ಕೆ ಕಾಲಿಟ್ಟ ಕೂಡಲೇ ಅಭಿಮಾನಿಗಳು ಆರ್ಸಿಬಿ ನಾಯಕ ಕೆಎಲ್ ರಾಹುಲ್ ಎಂದು ಘೋಷಣೆ ಕೂಗಲು ಆರಂಭಿಸಿದ್ದಾರೆ. ಈ ಕುರಿತಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಘೋಷಣೆ ನೆರವೇರಲಿ ಎಂದು ನೆಟ್ಟಿಗರು ಕಮೆಂಟ್ ಹಾಕಿ ಹಾರೈಸಿದ್ದಾರೆ.
ಎಲ್ಎಸ್ಜಿ ತೊರಡಯುತ್ತಾರಾ ರಾಹುಲ್
17ನೇ ಆವೃತ್ತಿಯ ಐಪಿಎಲ್ನಲ್ಲಿ ನಡೆದ ಕೆಲ ಘಟನೆಗಳಿಂದ ರಾಹುಲ್ ಲಖನೌ ಸೂಪರ್ಜೈಂಟ್ಸ್ ತಂಡವನ್ನು ತೊರೆಯುತ್ತಾರೆ ಎಂದು ಹೇಳಲಾಗಿತ್ತು. ಲಖನೌ ತೊರೆದು ಆರ್ಸಿಬಿ ಸೇರುತ್ತಾರೆ ಎಂದು ವರದಿಯಾಗಿತ್ತು. ಈ ಸುದ್ದಿ ನಿಜವಾಗಲೆಂದು ಬಯಸಿರುವ ಅಭಿಮಾನಿಗಳು, ಕೆಎಲ್ ರಾಹುಲ್ ಆರ್ಸಿಬಿ ತಂಡವನ್ನು ಸೇರಿಕೊಳ್ಳಲಿ ಎಂದು ಆಶಿಸುತ್ತಿದ್ದಾರೆ. ಈ ವರ್ಷಾಂತ್ಯ ಅಥವಾ 2025ರಲ್ಲಿ ನಡೆಯುವ ಮೆಗಾ ಹರಾಜಿನಲ್ಲಿ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದ್ದು, ಅಭಿಮಾನಿಗಳು ರಾಹುಲ್ ಆರ್ಸಿಬಿಗೆ ವಾಪಸ್ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.