ಬೆಂಗಳೂರು: ಆಗಸ್ಟ್ 09ರಂದುಬಿಡುಗಡೆಯಾಗಿ ಬಾಕ್ಸ್ಆಫೀಸಿನಲ್ಲಿ ಧೂಳೆಬ್ಬಿಸಿದ್ದ ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಭೀಮ ಚಿತ್ರವು ಸದ್ದಿಲ್ಲದೆ ಒಟಿಟಿಗೆ ಲಗ್ಗೆ ಇಟ್ಟಿದ್ದು, ಒಟಿಟಿಯಲ್ಲೂ ಸಖತ್ ಸೌಂಡ್ ಮಾಡುತ್ತಿದೆ.
ಆಗಸ್ಟ್ 09ರಂದು ಬಿಡುಗಡೆಯಾದ ಈ ಚಿತ್ರವು ಯಾವಾಗ ಒಟಿಟಿಗೆ ಲಗ್ಗೆ ಇಡುತ್ತದೆ ಎಂದು ಸಿನಿರಸಿಕರು ಕಾದಿದ್ದರು. ಇದೀಗ ಈ ಪ್ರಶ್ನೆಗೆ ಭೀಮ ಚಿತ್ರತಂಡ ಉತ್ತರ ನೀಡಿದ್ದು, ಸಿನಿಮಾ ಬಿಡುಗಡೆಯಾಗಿ ಹೆಚ್ಚು ಕಡಿಮೆ ಒಂದು ತಿಂಗಳಿಗೆ ಅಮೆಜಾನ್ ಪ್ರೈಮ್ನಲ್ಲಿ ಸ್ಟ್ರೀಮ್ ಆಗುತ್ತಿದೆ. ಬೆಂಗಳೂರಿನ ಡ್ರಗ್ ಮಾಫಿಯಾ ಸ್ಟೋರಿ ಸಿನಿಮಾ ಕೊನೆಗೂ ಇದೀಗ ಒಟಿಟಿಯಲ್ಲಿ ನೋಡಬಹುದಾಗಿದೆ.
ಭೀಮ ಚಿತ್ರದಲ್ಲಿ ಡ್ರಗ್ಸ್ ದಂಧೆ ಬಗ್ಗೆ ಬೆಳಕು ಚೆಲ್ಲಿದ್ದ ನಟ ದುನಿಯಾ ವಿಜಯ್ ಯುವ ಪೀಳಿಗೆ ಈ ಮಾರಕ ಅಭ್ಯಾಸಕ್ಕೆ ಹೇಗೆ ಬಲಿಯಾಗುತ್ತಿದೆ ಎಂಬುದರ ಕುರಿತು ಸಂದೇಶ ನೀಡಿದ್ದರು. ಇದಲ್ಲದೆ ಖಾಸಗಿ ಸುದ್ದಿ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಕೆಲವು ಸ್ಥಳಗಳನ್ನು ಸಹ ತೋರಿಸಿದ್ದರು. ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯದಲ್ಲೂ ಅಬ್ಬರಿಸಿದ್ದ ಭೀಮ 20 ಕೋಟಿಗೂ ಅಧಿಕ ಕಮಾಯಿ ಮಾಡಿದ್ದು, ಇದೀಗ ಒಟಿಟಿಗೆ ಲಗ್ಗೆ ಇಟ್ಟಿದೆ.
ಇದನ್ನೂ ಓದಿ: ಗೌತಮ್ ಗಂಭೀರ್ರಿಂದ ಮಾತ್ರ ಪಾಕ್ ಕ್ರಿಕೆಟ್ ತಂಡವನ್ನು ಉಳಿಸಲು ಸಾಧ್ಯ; ಮಾಜಿ ಆಟಗಾರನ ಹೇಳಿಕೆ ವೈರಲ್
ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣದ ‘ಭೀಮ’ ಚಿತ್ರದಲ್ಲಿ ಅನುಭವಿ ಕಲಾವಿದರ ಜೊತೆ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಿತ್ತು. ಮಾಸ್ತಿ ಸಂಭಾಷಣೆ, ಚರಣ್ ರಾಜ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ಒಂದಷ್ಟು ತಪ್ಪುಗಳ ನಡುವೆಯೂ ಮಾಸ್ ಪ್ರೇಕ್ಷಕರನ್ನು ಸಿನಿಮಾ ರಂಜಿಸಿತ್ತು. ಮತ್ತೆ ಚಿತ್ರಮಂದಿರಗಳಲ್ಲಿ ಶಿಳ್ಳೆ ಚಪ್ಪಾಳೆ ಸದ್ದು ಕೇಳುವಂತಾಗಿತ್ತು.
ಚಿತ್ರಮಂದಿರಗಳಲ್ಲಿ ‘ಭೀಮ’ನ ಕಾರುಬಾರು ಜೋರಾಗಿತ್ತು. ರಜಾ ದಿನ ಅಲ್ಲದೇ ವಾರದ ದಿನದಲ್ಲಿ(ಶುಕ್ರವಾರ) ಕೆಲವೆಡೆ ಶೋಗಳು ಹೌಸ್‌ಫುಲ್ ಆಗಿತ್ತು. ಸಂಜೆ ಮೇಲೆ ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್‌ಗೂ ರೆಸ್ಪಾನ್ಸ್ ಚೆನ್ನಾಗಿತ್ತು.