ನವದೆಹಲಿ: ಟೀಮ್ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ದಿನ ಕಳೆದಂತೆ ತಮ್ಮ ಕ್ರೇಜ್ಅನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. 17ನೇ ಆವೃತ್ತಿಯ ಐಪಿಎಲ್ನಲ್ಲಿ ಕೆಕೆಆರ್ ಮೆಂಟರ್ ಆಗಿ ಅಧಿಕಾರವಹಿಸಿಕೊಂಡ ಗೌತಮ್ ಸಂಯೋಜನೆ ಬದಲಿಸುವ ಮೂಲಕ ತಂಡ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಾದ ಬಳಿಕ ಅವರು ಟೀಮ್ ಇಂಡಿಯಾದ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದು, ಆರಂಭದಲ್ಲೇ ಸಿಹಿ-ಕಹಿ ಲಭಿಸಿದೆ. ಆಟಗಾರರಲ್ಲಿರುವ ಪ್ರತಿಭೆಯನ್ನು ಹೊರತಂದು ಅವರಿಗೆ ಬೇಕಾದ ಬೆಂಬಲ ನೀಡುವ ಮೂಲಕ ಗಂಭೀರ್ ಎಲ್ಲರಿಗೂ ಸಮಾನ ಅವಕಾಶ ನೀಡುತ್ತಿದ್ದಾರೆ.
ಇದೀಗ ಗೌತಮ್ ಗಂಭೀರ್ರನ್ನು ಪಾಕಿಸ್ತಾನ ಕ್ರಿಕೆಟ್ ಕೋಚ್ ಆಗಿ ನೇಮಿಸುವಂತೆ ಆಗ್ರಹ ಕೇಳಿ ಬರುತ್ತಿದ್ದು, ಇದಕ್ಕೆ ಸೂಕ್ತ ಕಾರಣವನ್ನು ನೀಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಮುಗದಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋಲುಂಡಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದ್ದು, ಈ ಬಗ್ಗೆ ಭಾರತ ಮೂಲದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಡ್ಯಾನಿಶ್, , ಗೌತಮ್ ಗಂಭೀರ್ ಅತ್ಯುತ್ತಮ ಕ್ರಿಕೆಟಿಗ, ಅವರು ಒಳ್ಳೆಯ ವ್ಯಕ್ತಿ. ಅವರು ಎಂದಿಗೂ ಬೆನ್ನ ಹಿಂದೆ ಮಾತನಾಡುವ ವ್ಯಕ್ತಿ ಅಲ್ಲ. ಏನೇ ಇದ್ದರೂ ನೇರವಾಗಿಯೇ ಹೇಳುತ್ತಾರೆ. ಪಾಕಿಸ್ತಾನ ಕ್ರಿಕೆಟ್ ತಂಡ ಸುಧಾರಿಸಬೇಕೆಂದರೆ ಅದಕ್ಕೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಗೌತಮ್ ಗಂಭೀರ್ ಅವರಂತಹ ಕೋಚ್ ಅಗತ್ಯವಿದೆ.

ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಶುಭಾಶಯ ತಿಳಿಸಿದ ಡೇವಿಡ್ ವಾರ್ನರ್; ವ್ಯಾಪಕ ಪ್ರಶಂಸೆಗೆ ಪಾತ್ರವಾಗುತ್ತಿದೆ ಪೋಸ್ಟ್
ಸದ್ಯ ಪಾಕಿಸ್ತಾನ ತಂಡಕ್ಕೆ ಬಲವಾದ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೋಚ್ ಅಗತ್ಯವಿದೆ. ಅದಕ್ಕೆ ಹೇಳಿ ಮಾಡಿಸಿದ ವ್ಯಕ್ತಿಯಾಗಿ ಗಂಭೀರ್ ಇದ್ದಾರೆ. ಕಳಪೆ ಪ್ರದರ್ಶನ ನೀಡುವ ಆಟಗಾರರನ್ನು ತಂಡದಿಂದ ಕೈಬಿಡಲು ಹಿಂದೆ ಮುಂದೆ ನೋಡದಂತಹ ಕೋಚ್ ಪಾಕಿಸ್ತಾನಕ್ಕೂ ಬೇಕಾಗಿದ್ದಾರೆ ಎಂದು ಡ್ಯಾನಿಶ್ ಕನೇರಿಯಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ತಿಂಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧದ ಸರಣಿ, ಟಿ20 ವಿಶ್ವಕಪ್, ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಹೀನಾಯವಾಗಿ ಸೋತಿತ್ತು. ಇದರಲ್ಲಿ ಪ್ರಮುಖವಾಗಿ ಟಿ20 ವಿಶ್ವಕಪ್ನಲ್ಲಿ ಅಮೆರಿಕ ವಿರುದ್ಧ ಸೋಲುವ ಮೂಲಕ ತೀವ್ರ ಮುಖಭಂಗವನ್ನು ಅನುಭವಿಸಿತ್ತು. ವಿಶ್ವಕಪ್ ವಿಜೇತ ತಂಡದ ಕೋಚ್ ನೇಮಿಸಿದರೂ ಸಹ ತಂಡದ ಈ ವೈಫಲ್ಯಕ್ಕೆ ಮಂಡಳಿ ಕಾರಣ ಹುಡುಕುತ್ತಿದ್ದು, ಇದರ ಬೆನ್ನಲ್ಲೇ ಕೋಚ್ ಹಾಗೂ ನಾಯಕತ್ವ ಬದಲಾವಣೆಎ ಆಗ್ರಹ ಕೇಳಿ ಬರುತ್ತಿದೆ.
ಬಾಂಗ್ಲಾದೇಶ ವಿರುದ್ಧದ ಸೋಲಿನ ನಂತರ ಶಾನ್ ಮಸೂದ್ ಅವರನ್ನು ಟೆಸ್ಟ್ ನಾಯಕತ್ವದಿಂದ ಮತ್ತು ಬಾಬರ್ ಆಝಂ ಅವರನ್ನು ಟಿ20 ನಾಯಕತ್ವದಿಂದ ತೆಗೆದುಹಾಕಬಹುದು ಎಂಬ ಸುದ್ದಿ ಇದೀಗ ಪಾಕಿಸ್ತಾನದಲ್ಲಿ ಹರಿದಾಡುತ್ತಿದೆ. ಅವರ ಸ್ಥಾನದಲ್ಲಿ ಮೊಹಮ್ಮದ್ ರಿಜ್ವಾನ್ ಅವರು ಎಲ್ಲಾ ಮೂರು ಮಾದರಿಗಳ ನಾಯಕರಾಗಬಹುದು ಎಂದು ಹೇಳಲಾಗುತ್ತಿದೆ.