

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ 104 ದಿನಗಳ ಕಾಲ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ ಪರಿಣಾಮ ಅಂಗಾಂಗ ವೈಫಲ್ಯದಿಂದ ಮೃತಪಟ್ಟಿರುವ ಘಟನೆ ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದೆ.
ಮೃತರನ್ನು ಅಬಾವೊ (30) ಎಂದು ಗುರುತಿಸಲಾಗಿದ್ದು, ಈ ಘಟನೆಯೂ ಚೀನಾದಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದ್ದು, ನ್ಯಾಯಾಲಯ 56 ಸಾವಿರ ಡಾಲರ್ ಪರಿಹಾರ ನೀಡುವಂತೆ ಆದೇಶಿಸಿದೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಬಾವೊರನ್ನು ಅವರ ಕಂಪನಿ ಯಾವುದೇ ರಜೆ ನೀಡದೆ ಸತತವಾಗಿ ದುಡಿಸಿಕೊಳ್ಳುತ್ತಿತ್ತು. 104 ದಿನಗಳ ಕಾಲ ರಜೆಯಿಲ್ಲದೆ ಸತತವಾಗಿ ಕೆಲಸ ಮಾಡಿದ್ದ ಅಬಾವೊ ಒಂದು ದಿನ ಏಕಾಏಕಿ ಕುಸಿದು ಬಿದ್ದಿದ್ದರು. ಕಾರಣ 48 ಗಂಟೆಗಳ ಕಾಲ ಸತತವಾಗಿ ಕೆಲಸ ಮಾಡಿದ್ದರು ಎಂದು ವರದಿಯಾಗಿದೆ.
ಕೂಡಲೇ ಅವರನ್ನು ಸಹೋದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಲಾದರೂ ಅವರ ಸ್ಥಿತಿ ಗಂಭೀರವಾಯಿತು. ಶ್ವಾಸಕೋಶದ ಸೋಂಕು ಮತ್ತು ಉಸಿರಾಟದ ತೊಂದರೆ ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದರು. ಈ ಬಗ್ಗೆ ಅಬಾವೊ ಕುಟುಂಬಸ್ಥರು ಕಂಪನಿ ಅವರನ್ನು ಕೇಳಿದಾಗ ಯಾವುದೇ ಪರಿಹಾರವನ್ನು ಕೊಡುವುದಿಲ್ಲ ಎಂದು ಹೇಳಿ ಕಳುಹಿಸಿದ್ದರು.
ನ್ಯಾಯಾಕ್ಕಾಗಿ ಆಗ್ರಹಿಸಿ ಅಬಾವೊ ಕುಟುಂಬಸ್ಥರು ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಕಂಪನಿಯು ಒಂದು ರೂಪಾಯಿ ಪರಿಹಾರವನ್ನೂ ನೀಡುವುದಿಲ್ಲ ಎಂದು ವಾದಿಸಿತ್ತು. ನಾವು ಚೀನಾದ ಕಾರ್ಮಿಕ ಕಾನೂನುಗಳ ಪ್ರಕಾರ ಕಾರ್ಯನಿರ್ವಹಿಸಿದ್ದೇವೆ. ಅಲ್ಲದೆ, ಹೆಚ್ಚಿನ ಸಮಯ ಕೆಲಸ ಮಾಡಲು ಕೇಳಲಿಲ್ಲ ಎಂದು ವಾದ ಮಂಡಿಸಿತ್ತು. ಉದ್ಯೋಗಿ ಒತ್ತಡದಿಂದ ಸಾಯಲು ಕಂಪನಿಯೆ ಕಾರಣ ಎಂದು ಮೃತನ ಪರ ವಕೀಲರು ಆರೋಪಿಸಿದ್ದರು. ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ನ್ಯಾಯಾಲಯವು 56 ಸಾವಿರ ಡಾಲರ್ ಪರಿಹಾರ ನೀಡುವಂತೆ ಕಂಪನಿಗೆ ಆದೇಶಿಸಿದ್ದು, ಅಂದರೆ ಭಾರತೀಯ ಕರೆನ್ಸಿ ಪ್ರಕಾರ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.
ಸ್ವಲ್ಪವೂ ಬಿಡುವು ಪಡೆಯದೆ ಕೆಲಸ ಮಾಡಿಸಿದರೆ ಯಂತ್ರಗಳೇ ಹಾಳಾಗುತ್ತವೆ ಇನ್ನು ಮನುಷ್ಯ ಬದುಕಲು ಸಾಧ್ಯವೇ ಎಂಬ ಮಾತಿಗೆ ಈ ಪ್ರಕರಣ ಜೀವಂತ ನಿದರ್ಶನವಾಗಿದೆ.