ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಜಯ್ ಷಾ ಅವಿರೋಧವಾಗಿ ಆಯ್ಕೆಯಾಗಿದ್ದು, ಪಾಕಿಸ್ತಾನ ಸೇರಿದಂತೆ ಎಲ್ಲಾ ದೇಶಗಳ ಕ್ರಿಕೆಟ್ ಮಂಡಳಿಗಳು ಜಯ್ ಷಾ ಆಯ್ಕೆಯನ್ನು ಬೆಂಬಲಿಸಿದ್ದು, ಡಿಸೆಂಬರ್ 01ರಂದು ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಜಯ್ ಷಾ ಅವರ ಆಯ್ಕೆ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಅಲ್ಲಿನ ಕ್ರಿಕೆಟ್ ಮಂಡಳಿ ಸದಸ್ಯರು ಹೇಳಿಕೆಗಳನ್ನು ಕೊಡುತ್ತಿದ್ದು, ಇದೀಗ ಪಿಸಿಬಿ ಅಧ್ಯಕ್ಷ ಮೊಹ್ನಿನ್ ನಖ್ವಿ ಕೂಡ ಮಾತನಾಡಿದ್ದಾರೆ.
ಏಕೆಂದರೆ ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಹಾಲಿ ಚಾಂಪಿಯನ್ಸ್ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿದ್ದು, ಭದ್ರತೆಯ ಕಾರಣದಿಂದಾಗಿ ಭಾರತ ಪಾಕ್ಗೆ ಕಾಲಿಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ. ಆದರೆ, ಭಾರತ ಪಾಕಿಸ್ತಾನಕ್ಕೆ ಆಡಲು ಬರುತ್ತದೆ ಎಂಬ ನಂಬಿಕೆಯಿಂದ ಐಸಿಸಿ ಅಧ್ಯಕ್ಷ ಹುದ್ದೆಗೆ ಜಯ್ ಷಾ ಆಯ್ಕೆಯನ್ನು ಪಿಸಿಬಿ ಬೆಂಬಲ ಸೂಚಿಸಿದ್ದು, ಈ ಒಂದು ಕಾರಣಕ್ಕಾಗಿಯೇ ಎಂದು ಹೇಳಲಾಗಿದೆ.
ಈ ಕುರಿತು ಮಾತನಾಡಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ನಾವು ಜಯ್ ಷಾ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರು ಅಧ್ಯಕ್ಷರಾಗಿರುವ ಬಗ್ಗೆ ನಮಗೇನು ಕಾಳಜಿ ಇಲ್ಲ. ಸೆಪ್ಟೆಂಬರ್ 8 ಮತ್ತು 9ರಂದು ನಡೆಯಲಿದ್ದು, ನನ್ನ ಬದಲಾಗಿ ಪಿಸಿಬಿ ವತಿಯಿಂದ ಬೇರೊಬ್ಬರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ನೂತನ ಅಧ್ಯಕ್ಷರಿಗೆ ಸಂಬಂಧಿಸಿದ ವಿಷಯಗಳನ್ನು ಅಂತಿಮಗೊಳಿಸಲಾಗುವುದು ಎಂದು ನಖ್ವಿ ಹೇಳಿದ್ದಾರೆ.
ಇದನ್ನೂ ಓದಿ: VIDEO| ಆರ್ಸಿಬಿ ನಾಯಕ ಯಾರು… ಕನ್ನಡಿಗನ ಪರ ಚಿನ್ನಸ್ವಾಮಿ ಮೊಳಗಿತು ಜಯಘೋಷ
ಆರ್ಥಿಕ ಸಂಕಷ್ಟದ ಭಯ
ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದ್ದು, ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾಗೆ ಇರುವ ಕ್ರೇಜ್ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್ ಮೇಲೆ ಇರುವ ಕಳಂಕವೂ ದೂರವಾಗಲಿದೆ ಎಂಬ ನಂಬಿಕೆಯಲ್ಲಿ ಅಲ್ಲಿನ ಕ್ರಿಕೆಟ್ ಮಂಡಳಿ ಕಾದು ಕುಳಿತಿದೆ. ಅಲ್ಲದೇ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಕ್ರಿಕೆಟ್ ಮೂಲಕ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ. ಆದರೆ, ಪಿಸಿಬಿ ನಿರೀಕ್ಷೆಗೆ ಬಿಸಿಸಿಐ ಆಘಾತ ನೀಡಿದ್ದು, ಬಹುತೇಕ ಟೀಮ್ ಇಂಡಿಯಾ ಪಾಕಿಸ್ತಾನ ತೆರಳುವುದು ಅನುಮಾನವಾಗಿದೆ.
ಇದಲ್ಲದೆ ಭದ್ರತೆಯ ಕಾರಣದಿಂದಾಗಿ ಭಾರತದ ಪಂದ್ಯಗಳನ್ನು ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಸುವುದಾಗಿ ತಿಳಿಸಿದ್ದು, ಇದಕ್ಕಾಗಿ ಕ್ರೀಡಾಂಗಣದ ಪಕ್ಕದಲ್ಲಿರುವ ಐದು ಎಕರೆ ಜಮೀನನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಭಾರತದ ಆಟಗಾರರು ಹಾಗೂ ಸಿಬ್ಬಂದಿ ಉಳಿದುಕೊಳ್ಳಲು 5 ಸ್ಟಾರ್ ಹೋಟೆಲ್ ನಿರ್ಮಿಸುತಿವುದಾಗಿ ಪಿಸಿಬಿ ತಿಳಿಸಿದೆ. ಇದಲ್ಲದೆ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದರಿಂದ ಉಭಯ ದೇಶಗಳ ನಡುವಿನ ಸಂಬಂಧ ಸ್ವಲ್ಪಮಟ್ಟಿಗೆ ಸರಿಹೋಗಬಹುದು ಎಂದು ಪಿಸಿಬಿ ಆಶಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಭಾರತ ಸರ್ಕಾರ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ.