ಕರ್ನಾಟಕದಲ್ಲಿ ಪ್ರತಿ ಗಂಟೆಗೆ 19 ಮಂದಿಗೆ ಬೀದಿನಾಯಿ ಕಡಿತ!; ಈ ವಿಷಯದಲ್ಲಿ ದೇಶದಲ್ಲಿ ರಾಜ್ಯಕ್ಕೆ ಐದನೇ ಸ್ಥಾನ

jhansi dog
ಸಾಂದರ್ಭಿಕ ಚಿತ್ರ
Published on

ನವದೆಹಲಿ: ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರು ರಾತ್ರಿ ಸಂಚರಿಸುವಾಗ ಕಳ್ಳರು ಎದುರಾಗುತ್ತಾರೋ ಇಲ್ಲವೋ, ಬೀದಿನಾಯಿಗಳಂತೂ ಖಂಡಿತ ಎದುರಾಗುತ್ತವೆ. ರಾತ್ರಿ ಮಾತ್ರವಲ್ಲ ಹಗಲಲ್ಲೂ ಬೀದಿನಾಯಿಗಳ ಹಾವಳಿ ಕಡಿಮೆ ಏನಿಲ್ಲ. ಇದು ಬರೀ ರಾಜ್ಯದ ಸಮಸ್ಯೆಯಷ್ಟೇ ಅಲ್ಲ, ದೇಶಾದ್ಯಂತವೂ ಈ ಸಮಸ್ಯೆ ಕಾಡುತ್ತಿದೆ.

ಆರೋಗ್ಯ ಖಾತೆಯ ರಾಜ್ಯ ಸಚಿವ, ಗುಜರಾತ್​ನ ಸತ್ಯಪಾಲ್​ ಸಿಂಗ್ ಬಘೇಲ್ ಅವರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ನೀಡಿದ್ದ ಅಂಕಿ-ಅಂಶಗಳಿಂದ ಬೀದಿನಾಯಿ ಕಡಿತದ ಪ್ರಕರಣಗಳ ಸಮಸ್ಯೆಯ ತೀವ್ರತೆ ಅನಾವರಣಗೊಂಡಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಬೀದಿನಾಯಿ ಕಡಿತದ ಕುರಿತು ಅಂಕಿ-ಅಂಶ ತೆರೆದಿಟ್ಟರು.

ಕಳೆದ ವರ್ಷದಲ್ಲಿ ಬೀದಿನಾಯಿ ಕಡಿತದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿತ್ತು. ಅಲ್ಲಿ, ಗಂಟೆಗೆ 45 ಬೀದಿನಾಯಿ ಕಡಿತ ಪ್ರಕರಣ ಸಂಭವಿಸಿದ್ದರೆ, ತಮಿಳುನಾಡಿನಲ್ಲಿ 42, ಉತ್ತರಪ್ರದೇಶದಲ್ಲಿ 22, ಗುಜರಾತ್​ ಮತ್ತು ಕರ್ನಾಟಕದಲ್ಲಿ 19 ಹಾಗೂ ಬಿಹಾರದಲ್ಲಿ 16 ಎಂಬ ಮಾಹಿತಿ ನೀಡಿದ್ದರು.

ಗುಜರಾತ್​ನಲ್ಲಿ 2022ರಲ್ಲಿ ಬೀದಿನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಒಟ್ಟು 1,69,261 ಪ್ರಕರಣಗಳು ದಾಖಲಾಗಿವೆ. ಅಂದರೆ ಪ್ರತಿ ಗಂಟೆಗೆ 19 ಮಂದಿಗೆ ಬೀದಿನಾಯಿಗಳು ಕಚ್ಚಿವೆ, ಅರ್ಥಾತ್, ಒಂದು ದಿನಕ್ಕೆ 464 ಪ್ರಕರಣ. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎಂದೂ ಅವರು ತಿಳಿಸಿದ್ದಾರೆ. ಬೀದಿನಾಯಿ ಕಡಿತಕ್ಕೆ ಸಂಬಂಧಿಸಿದಂತೆ 2020ರಲ್ಲಿ 4.31 ಲಕ್ಷ ಇದ್ದ ಪ್ರಕರಣ, 2021ರಲ್ಲಿ 1.91 ಲಕ್ಷ ಹಾಗೂ 2022ರಲ್ಲಿ 1.69 ಲಕ್ಷ ಆಗುವ ಮೂಲಕ ಇಳಿಕೆ ಕಂಡಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net