ಆಣೆ ಮಾಡುವ ಹಂತಕ್ಕೆ ತಲುಪಿತು ಸೌಜನ್ಯಾ ಪ್ರಕರಣ; ಇಬ್ಬರ ಮಧ್ಯೆ ಆರೋಪ, ದೇವರ ಮುಂದೆ ಪ್ರಮಾಣ!

Giliyar
Published on

ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳ ಪರಿಸರದಲ್ಲಿ ದಶಕದ ಹಿಂದೆ ನಡೆದಿದ್ದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ನ್ಯಾಯ ಸಿಗಲಿಲ್ಲ ಎಂದು ಹನ್ನೊಂದು ವರ್ಷಗಳ ಬಳಿಕ ಇತ್ತೀಚೆಗೆ ಕೆಲವು ದಿನಗಳಿಂದ ಮತ್ತೆ ಈ ಪ್ರಕರಣ ಮುನ್ನೆಲೆಗೆ ಬಂದಿದೆ.

ನಾವು ಸೌಜನ್ಯಾ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವ ಸಲುವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹಲವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳಿಂದ ಸದ್ದು ಮಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಶೋಧನೆ ನಡೆಸುತ್ತಿರುವುದಾಗಿ ಉಡುಪಿ ಜಿಲ್ಲೆಯ ಪತ್ರಕರ್ತ ವಸಂತ್ ಗಿಳಿಯಾರ್ ಎನ್ನುವವರು, ದಕ್ಷಿಣಕನ್ನಡ ಜಿಲ್ಲೆಯ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಎನ್ನುವವರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದಾರೆ.

ಈ ಮಧ್ಯೆ ಉಡುಪಿ ಜಿಲ್ಲೆಯ ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ ಎಂಬವರು ಪತ್ರಕರ್ತ ವಸಂತ್ ಗಿಳಿಯಾರ್ ವಿರುದ್ಧ ಆರೋಪ ಮಾಡಿದ್ದಾರೆ. ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪತ್ರಿಕೆಯಲ್ಲಿ 2016ರಲ್ಲಿ ವಸಂತ್ ಗಿಳಿಯಾರ್ ಐದು ಲಕ್ಷ ರೂ. ಪಡೆದಿದ್ದರು. ಅಲ್ಲದೆ ಆ ವರದಿ ಇದ್ದ ಪತ್ರಿಕೆ ಇನ್ನೊಬ್ಬರಿಗೆ ತಲುಪಿಸಿದ್ದೂ ಗೊತ್ತು ಎಂದು ದಿನೇಶ್ ಗಾಣಿಗ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ನಡೆದ ಸಂಘರ್ಷ ಇದೀಗ ಆಣೆ-ಪ್ರಮಾಣದ ಹಂತಕ್ಕೆ ತಲುಪಿದೆ. ಉಡುಪಿ ಜಿಲ್ಲೆಯ ಕೋಟತಟ್ಟು ಪಡುಕೆರೆ ನಾಗಬನ ಹಾಗೂ ಯಕ್ಷಿ ಸನ್ನಿಧಾನದಲ್ಲಿ ಇವರಿಬ್ಬರು ತೆಂಗಿನಕಾಯಿ ಮುಟ್ಟಿ ಪ್ರಮಾಣ ಮಾಡಿದ್ದು, ಇಬ್ಬರಲ್ಲಿ ಯಾರು ಸರಿ ಎಂದು ದೇವರೇ ತೋರಿಸಲಿ ಎಂದು ಕೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net