

ಪಂಜಾಬ್: ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್, ಶುಕ್ರವಾರ ಬಿಜೆಪಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದು, ನನ್ನನ್ನು ಬಂಧಿಸುವ ಮೂಲಕ ಎಎಪಿ ಪಕ್ಷವನ್ನು ಕೊನೆಗೊಳಿಸುವ ಬಯಕೆ ಬಿಜೆಪಿಯವರದ್ದು. ಆದರೆ, ನನ್ನ ಅರೆಸ್ಟ್ ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ. ಕಾರಣ, ಪ್ರತಿಯೊಬ್ಬ ಎಎಪಿ ಕಾರ್ಯಕರ್ತ ಕೂಡ ಕೇಜ್ರಿವಾಲ್ ಆಗಿರುತ್ತಾರೆ ಎಂದು ಗುಡುಗಿದರು.
ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಅಮೃತ್ಸರ್ನಲ್ಲಿ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್, "ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿ, ಕೆಲವು ಮಾಹಿತಿಗಳನ್ನು ಪಕ್ಷದವರೊಂದಿಗೆ ಹಂಚಿಕೊಂಡರು. ಈ ವೇಳೆ ಬಿಜೆಪಿ ವಿರುದ್ಧ ಸಿಡಿದೆದ್ದ ದೆಹಲಿ ಸಿಎಂ, ಆಪ್ ಒಂದು ಕುಟುಂಬ ಮತ್ತು ಕುಟುಂಬದಲ್ಲಿ ತೊಂದರೆ ಬಂದಾಗ ಎಲ್ಲರೂ ಒಟ್ಟಿಗೆ ಕೂಡಿ ಸಮಸ್ಯೆ ಬಗೆಹರಿಸುತ್ತಾರೆ. ನೀವೂ ಹಾಗೆಯೇ ಮಾಡಿದ್ದೀರಿ" ಎಂದರು.
"ಇಂದು ನೀವೆಲ್ಲರೂ ಸಹ ಒಟ್ಟಿಗೆ ಬಂದಿದ್ದೀರಾ. ಒಬ್ಬ ಕೇಜ್ರಿವಾಲ್ ಬಂಧಿಸುವ ಕೆಲಸ ಮಾಡಿದರೂ ಅದು ವಿಫಲ ಎಂಬ ಸಂದೇಶವನ್ನು ಅವರಿಗೆ (ಬಿಜೆಪಿ) ತಲುಪಿಸಿದ್ದೀರಿ. ಇಲ್ಲಿ ಒಬ್ಬನೇ ಕೇಜ್ರಿವಾಲ್ ಅಲ್ಲ, ಆಮ್ ಆದ್ಮಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಸಹ ಕೇಜ್ರಿವಾಲ್ ಎಂಬುದು ನೆನಪಿರಲಿ" ಎಂದು ಖಡಕ್ ಆಗಿ ಹೇಳಿದ್ದಾರೆ,(ಏಜೆನ್ಸೀಸ್).