

ಚೆನ್ನೈ: ಆತಿಥೇಯ ಭಾರತ ತಂಡದ ಕೆಲ ಆಟಗಾರರು ಬುಧವಾರ ಚೆನ್ನೈಗೆ ಆಗಮಿಸಿದ್ದಾರೆ. ಶ್ರೀಲಂಕಾ ಪ್ರವಾಸ ಮುಗಿಸಿರುವ ಜೋ ರೂಟ್ ಸಾರಥ್ಯದ ಇಂಗ್ಲೆಂಡ್ ತಂಡದ ಆಟಗಾರರು ಕೂಡ ಬುಧವಾರ ಚೆನ್ನೈಗೆ ಬಂದಿಳಿದಿದ್ದಾರೆ. ಉಭಯ ತಂಡಗಳ ಆಟಗಾರರು ಇನ್ನು 6 ದಿನಗಳ ಕ್ವಾರಂಟೈನ್ನಲ್ಲಿರಲಿದ್ದು, ೆಬ್ರವರಿ 5ರಿಂದ 4 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ಲಂಕಾದಿಂದ ಬೆಳಗ್ಗೆ 10.30ಕ್ಕೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಇಂಗ್ಲೆಂಡ್ ತಂಡದ ಆಟಗಾರರು ಬಳಿಕ ಹೋಟೆಲ್ಗೆ ತೆರಳಿದರು. ಅಲ್ಲಿ ಕರೊನಾ ಪರೀಕ್ಷೆಗೂ ಒಳಗಾದರು. 6 ದಿನಗಳ ಕ್ವಾಟಂಟೈನ್ನಲ್ಲಿ ಆಟಗಾರರು ಒಟ್ಟು 3 ಬಾರಿ ಕೋವಿಡ್-19 ಪರೀಕ್ಷೆಗೆ ಒಳಗಾಗಲಿದ್ದಾರೆ. ಲಂಕಾ ಪ್ರವಾಸದಲ್ಲಿ ಇಂಗ್ಲೆಂಡ್ ತಂಡದ ಭಾಗವಾಗಿರದಿದ್ದ ಮೂವರು ಆಟಗಾರರಾದ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಮತ್ತು ರೋರಿ ಬರ್ನ್ಸ್ ಕಳೆದ ಭಾನುವಾರವೇ ಚೆನ್ನೈಗೆ ಆಗಮಿಸಿ ಕ್ವಾರಂಟೈನ್ಗೆ ಒಳಪಟ್ಟಿದ್ದಾರೆ.
ಭಾರತ ತಂಡದ ಆಟಗಾರರಾದ ರೋಹಿತ್ ಶರ್ಮ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಮಂಗಳವಾರ ರಾತ್ರಿಯೇ ಆಗಮಿಸಿದ್ದರೆ, ಚೇತೇಶ್ವರ ಪೂಜಾರ, ಜಸ್ಪ್ರೀತ್ ಬುಮ್ರಾ ಮತ್ತು ರಿಷಭ್ ಪಂತ್ ಮತ್ತಿತರ ಆಟಗಾರರು ಮತ್ತು ಕೋಚ್ ರವಿಶಾಸಿ ಬುಧವಾರ ಬೆಳಗ್ಗೆ ಬಂದಿಳಿದರು. ನಾಯಕ ವಿರಾಟ್ ಕೊಹ್ಲಿ ಬುಧವಾರ ರಾತ್ರಿಯ ವೇಳೆ ತಂಡವನ್ನು ಕೂಡಿಕೊಂಡರು.
ಸರಣಿಯ ಬಯೋ-ಬಬಲ್ನ ಭಾಗವಾಗಿರುವ ಹೋಟೆಲ್ ಲೀಲಾ ಪ್ಯಾಲೇಸ್ನಲ್ಲಿ ಉಭಯ ತಂಡಗಳು ಉಳಿದುಕೊಂಡಿದ್ದು, ಫೆಬ್ರವರಿ 2ರಿಂದ ಅಭ್ಯಾಸ ಆರಂಭಿಸಲಿವೆ. 2016ರ ಡಿಸೆಂಬರ್ ಬಳಿಕ ಮೊದಲ ಬಾರಿಗೆ ಚೆನ್ನೈನಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ.