ನಾಗರ ಶೈಲಿಯಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣ; ದಕ್ಷಿಣದ ದ್ರಾವಿಡ ಶೈಲಿಯ ಅಂಶವೂ ಅಳವಡಿಕೆ

Ayodhya
Published on

ಲಖನೌ: ಅಯೋಧ್ಯೆಯ ಶ್ರೀರಾಮಮಂದಿರವು ನಾಗರ ಶೈಲಿಯಲ್ಲಿ ನಿರ್ವಣವಾಗುತ್ತಿದ್ದು, ಆವರಣದಲ್ಲಿ ದಕ್ಷಿಣದ ದ್ರಾವಿಡ ಶೈಲಿಯ ಪ್ರಭಾವವೂ ಗೋಚರಿಸಲಿದೆ. ಇಡೀ ದೇವಾಲಯವು ಮೂರು ಅಂತಸ್ತಿನದ್ದಾಗಿದ್ದು, ದೇವಾಲಯದ ಪ್ರವೇಶವು ಪೂರ್ವ ದಿಕ್ಕಿನಿಂದ ಮತ್ತು ದಕ್ಷಿಣ ದಿಕ್ಕಿನಿಂದ ನಿರ್ಗಮನ ದ್ವಾರ ಇರಲಿದೆ. ಮುಖ್ಯ ದೇವಾಲಯವನ್ನು ತಲುಪಲು ಭಕ್ತರು ಪೂರ್ವ ಭಾಗದಿಂದ 32 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.

ದೇವಾಲಯವು 250 ಅಡಿ ಅಗಲ ಮತ್ತು 161 ಅಡಿ ಎತ್ತರವಿದೆ. ದೇವಾಲಯದ ಪ್ರತಿ ಅಂತಸ್ತಿನಲ್ಲೂ 20 ಅಡಿ ಎತ್ತರದ ಸ್ಥಂಭಗಳಿದ್ದು, ಒಟ್ಟು 392 ಕಂಬಗಳು ಮತ್ತು 44 ದ್ವಾರಗಳನ್ನು ಹೊಂದಿರುತ್ತದೆ. ದೇಗುಲದ ಮುಖ್ಯ ಆವರಣದೊಳಗೆ ಆಯತಾಕಾರದ ಪರದಿ ಇದ್ದು, ಇದಕ್ಕೆ ಪಕೋಟಾ ಎಂದು ಕರೆಯುತ್ತಾರೆ. ಪಕೋಟಾವು ದಕ್ಷಿಣ ಭಾರತದ ದೇವಾಲಯಗಳ ಮಾದರಿಯಾಗಿದ್ದು, ಉತ್ತರದಲ್ಲಿರುವ ದೇವಾಲಯಗಳು ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ. ಪಕೋಟಾ 14 ಅಡಿ ಅಗಲವಿದ್ದು 732 ಮೀಟರ್​ವರೆಗೆ ವಿಸ್ತರಿಸಲಿದೆ. ಪಕೋಟಾದ ನಾಲ್ಕು ದಿಕ್ಕುಗಳಲ್ಲಿ ಸೂರ್ಯ ದೇವರು, ತಾಯಿ ಭಗವತಿ, ಗಣೇಶ ಮತ್ತು ಭಗವಾನ್ ಶಿವನಿಗೆ ಸಮರ್ಪಿಸಲಾಗುವುದು. ಉತ್ತರ ಭಾಗದಲ್ಲಿ ಅನ್ನಪೂರ್ಣ ಮಾತೆಯ ದೇವಸ್ಥಾನವಿದ್ದು, ದಕ್ಷಿಣ ಭಾಗದಲ್ಲಿ ಹನುಮಂತ ದೇವರ ದೇವಸ್ಥಾನವಿರುತ್ತದೆ ಎಂದು ತಿಳಿಸಿದ್ದಾರೆ. ದೇವಾಲಯದ ಆವರಣದಲ್ಲಿ ಇನ್ನೂ 7 ಗುಡಿಗಳ ನಿರ್ವಣಕ್ಕೆ ಆಲೋಚಿಸಿದ್ದು, ಇದರಲ್ಲಿ ಮಹರ್ಷಿ ವಾಲ್ಮೀಕಿ, ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತಯ ನಿಶಾದ್ ರಾಜ್, ಮಾತಾ ಶಬರಿ ಮತ್ತು ದೇವಿ ಅಹಲ್ಯಾ ದೇವಸ್ಥಾನಗಳು ಇರಲಿವೆ ಎಂದು ರೈ ತಿಳಿಸಿದರು.

ಧ್ವಜ ಸಿದ್ಧಪಡಿಸಿದ ಮುಸ್ಲಿಂ ಟೈಲರ್: ಅಯೋಧ್ಯೆಯ ರಾಮಮಂದಿರದ ಮೇಲೆ ಹಾರಿಸಲು 40 ಅಡಿ ಉದ್ದ ಮತ್ತು 42 ಅಡಿ ಅಗಲದ ಧ್ವಜ ಸಿದ್ಧವಾಗಿದೆ. ಧ್ವಜವು ಒಂದು ಬದಿಯಲ್ಲಿ ಹನುಮಾನ್ ಮತ್ತು ಇನ್ನೊಂದು ಬದಿಯಲ್ಲಿ ಹನುಮಂತನ ಭುಜದ ಮೇಲೆ ರಾಮ ಮತ್ತು ಲಕ್ಷ್ಮಣನ ಚಿತ್ರಗಳನ್ನು ಹೊಂದಿದೆ. 21 ಸಾವಿರ ರೂಪಾಯಿ ಮೌಲ್ಯದ ಈ ಧ್ವಜವನ್ನು ಸಿದ್ಧಪಡಿಸಲು 150 ಮೀಟರ್ ಬಟ್ಟೆ ಬಳಸಲಾಗಿದೆ. ಇದನ್ನು ಜಾರ್ಖಂಡ್​ನ ಹಜಾರಿಬಾಗ್ ಜಿಲ್ಲೆಯಲ್ಲಿ ಗುಲಾಮ್ ಜಿಲಾನಿ ತಯಾರಿಸಿದ್ದಾರೆ.

bangalore ayodhya

ತಳಪಾಯಕ್ಕೆ ಬೆಂಗಳೂರಿನ ಶಿಲೆಗಳು: ಭವ್ಯ ರಾಮ ಮಂದಿರದ ಬುನಾದಿ ಕಾರ್ಯಕ್ಕೆ ಕರ್ನಾಟಕದ ಬಲಿಷ್ಠ ಶಿಲೆ ಬಳಸಲಾಗಿದೆ. ಬೆಂಗಳೂರಿನ ದೇವನಹಳ್ಳಿ ಬಳಿಯ ಸಾದರಹಳ್ಳಿ ಹಾಗೂ ಕೋಯಿರಾ ಪ್ರದೇಶದ ಶಿಲೆಗಳನ್ನು ಬಳಕೆ ಮಾಡಲಾಗಿದ್ದು, ಟ್ರಸ್ಟ್​ನ ಆದೇಶದಂತೆ 2021ರಿಂದಲೇ ಸುಮಾರು 150ಕ್ಕೂ ಅಧಿಕ ಲೋಡ್ ಶಿಲೆಗಳನ್ನು ಅಯೋಧ್ಯೆಗೆ ಕಳಿಸಲಾಗಿದೆ. 17000 ಶಿಲೆಗಳನ್ನು ಬಳಸಲಾಗಿದ್ದು, 21 ಅಡಿ ಎತ್ತರದವರೆಗೂ ಕಲ್ಲಿನ ಹಾಸುಗಳನ್ನು ಹಾಕಲಾಗಿದೆ. ಎಲ್ಲ ಶಿಲೆಗಳು 3 ಅಡಿ ದಪ್ಪ, 5 ಅಡಿ ಉದ್ದ ಹಾಗೂ ಎರಡೂವರೆ ಅಡಿ ಅಗಲವಾಗಿವೆ. ಇದರ ಜತೆಗೆ ಲಂಗಾಣದ ವರಂಗಲ್​ನ ಕಲ್ಲುಗಳನ್ನು ಬಳಸಲಾಗಿದೆ. ಎಂತಹ ಪ್ರಕೃತಿ ವಿಕೋಪ ಸಂಭವಿಸಿದರೂದಿಂದಲೂ ದೇಗುಲಕ್ಕೆ ಹಾನಿ ಸಂಭವಿಸಲ್ಲ ಎಂಬುದು ಪರಿಣಿತರ ಮಾತಾಗಿದೆ.

ಪ್ರಸ್ತುತ ಎದುರಿಸುತ್ತಿರುವ ನಿರುದ್ಯೋಗ, ಹಣದುಬ್ಬರ, ಶಿಕ್ಷಣ ಮತ್ತು ಆರೋಗ್ಯದಂತಹ ಸಮಸ್ಯೆಗಳ ಬಗ್ಗೆ ಮಾತನಾಡದೆ ಎಲ್ಲರೂ ರಾಮ, ಹನುಮಂತ ಮತ್ತು ದೇವಸ್ಥಾನಗಳ ಬಗ್ಗೆ ಮಾತನಾಡುತ್ತಾರೆ. ರಾಮಮಂದಿರವೇ ನಿಜವಾದ ಸಮಸ್ಯೆಯೇ? ಸಾಂರ್ದಭಿಕವಾಗಿ ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ. ಹಿಂದು ರಾಷ್ಟ್ರವನ್ನು ನಿರ್ವಿುಸಬೇಕೆ ಅಥವಾ ನಿಜವಾದ ಜಾತ್ಯತೀತ ರಾಷ್ಟ್ರವನ್ನು ನಿರ್ವಿುಸಬೇಕೆ ಎಂದು ಭಾರತದ ಜನರು ನಿರ್ಧರಿಸಬೇಕು.

| ಸ್ಯಾಮ್ ಪಿತ್ರೋಡಾ ಹಿರಿಯ ಕಾಂಗ್ರೆಸ್ ನಾಯಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net