

ನವದೆಹಲಿ: 2008 ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಂಡ ವಿಜಯವನ್ನು ಗಳಿಸಿದ ನಂತರ ಅವಾಮಿ ಲೀಗ್ ಬಾಂಗ್ಲಾದೇಶದಲ್ಲಿ ಅಧಿಕಾರಕ್ಕೆ ಬಂದಿತ್ತು. ಶೇಖ್ ಹಸೀನಾ ನಾಯಕತ್ವದ ಪಕ್ಷವು ಜನರಿಗೆ ಆಧುನಿಕ, ಪ್ರಗತಿಪರ ಮತ್ತು ಮುಕ್ತ ಪ್ರಜಾಪ್ರಭುತ್ವವನ್ನು ಭರವಸೆ ನೀಡಿತ್ತು.
ಮುಂದಿನ ಸಾರ್ವತ್ರಿಕ ಚುನಾವಣೆಗಳು ಜನವರಿ 2024ರಲ್ಲಿ ನಡೆಯಲಿದ್ದು ಅವಾಮಿ ಲೀಗ್ ಸತತ ನಾಲ್ಕನೇ ಬಾರಿಗೆ ಅಧಿಕಾರವನ್ನು ಭದ್ರಪಡಿಸಿಕೊಳ್ಳುವುದನ್ನೇ ಗುರಿಯಾಗಿಸಿಕೊಂಡಿದೆ. ದೀರ್ಘಾವಧಿಯ ಭರವಸೆಯಾದ ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ನಡೆಸುವ ಮೂಲಕ ಜನರಿಗೆ ನೀಡಿದ್ದ ಭರವಸೆಯನ್ನು ಪಾಲಿಸುವ ಒತ್ತಡದಲ್ಲಿ ಬಾಂಗ್ಲಾ ಸರ್ಕಾರವಿದೆ. ಆದರೆ ಆಡಳಿತ ಪಕ್ಷದ ಮೇಲೆ ಸೇಡಿನ ರಾಜಕಾರಣ, ಓಲೈಕೆಯ ಒಲವಿನ ನೀತಿಗಳು ಮತ್ತು ಸರ್ವಾಧಿಕಾರಿ ಧೋರಣೆ ಬೆಳೆಯುತ್ತಿದೆ ಎನ್ನುವ ಆರೋಪಗಳಿವೆ.
ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಬಾಂಗ್ಲಾದೇಶವು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಸಾಧಿಸಿದೆ. ವಿಶ್ವ ಬ್ಯಾಂಕ್ ಅಂಕಿಅಂಶಗಳ ಪ್ರಕಾರ, 1971 ರಲ್ಲಿ ಸ್ವಾತಂತ್ರ್ಯದ ಸಮಯದಲ್ಲಿ ಇದ್ದ ಕೇವಲ $6.2 ಶತಕೋಟಿಗೆ ಹೋಲಿಸಿದರೆ ರಾಷ್ಟ್ರೀಯ GDP 2021 ರಲ್ಲಿ $416.3 ಶತಕೋಟಿ ಇತ್ತು. ಬಾಂಗ್ಲಾದೇಶದ GDP 2030 ರ ವೇಳೆಗೆ ಪ್ರಸ್ತುತ ಗಾತ್ರಕ್ಕಿಂತ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. 2022ರ ಹೊತ್ತಿಗೆ ಜನರ ಸರಾಸರಿ ಜೀವಿತಾವಧಿ 72.4 ವರ್ಷಗಳಿಗೆ ಹೆಚ್ಚಾಗಿದೆ. ಶಿಶು ಮರಣ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಹುಡುಗಿಯರು ಮತ್ತು ಮಹಿಳೆಯರಿಗೆ ಶಿಕ್ಷಣ ನೀಡುವಲ್ಲಿ ಮಹತ್ತರವಾದ ಪ್ರಗತಿಯನ್ನು ಸಾಧಿಸಲಾಗಿದೆ. ಹುಡುಗರಿಗಿಂತ ಹೆಚ್ಚಿನ ಹುಡುಗಿಯರು ಈಗ ಮಾಧ್ಯಮಿಕ ಹಂತದ ಶಾಲೆಗಳಿಗೆ ದಾಖಲಾಗುತ್ತಿದ್ದು ಮತ್ತು 98 ಪ್ರತಿಶತದಷ್ಟು ಮಕ್ಕಳು ಕನಿಷ್ಠ ಪ್ರಾಥಮಿಕ ಹಂತದ ಶಿಕ್ಷಣವನ್ನು ಪೂರ್ಣಗೊಳಿಸುತ್ತಿದ್ದಾರೆ. ಜನರ ತಲಾ ಆದಾಯದ ವಿಚಾರದಲ್ಲಿ ಬಾಂಗ್ಲಾದೇಶ ಪ್ರಸ್ತುತ ದಕ್ಷಿಣ ಏಷ್ಯಾದಲ್ಲಿ ಎರಡನೇ ಸ್ಥಾನದಲ್ಲಿದೆ. ಮೆಗಾ ಮೂಲಸೌಕರ್ಯ ಅಭಿವೃದ್ಧಿಯು ವರ್ಷಗಳಿಂದ ಆಡಳಿತ ಪಕ್ಷದ ಪೋಸ್ಟರ್ ವಸ್ತುವಾಗಿದೆ.
ಆದರೆ ಈ ಅಪೇಕ್ಷಣೀಯ ಯಶಸ್ಸಿನ ಜತೆ ಜತೆಗೆ ಅಸಮಾನತೆಯೂ ಬೆಳೆಯುತ್ತಿದೆ ಎಂದು ಆರೋಪಿಸಲಾಗಿದೆ. ಬಾಂಗ್ಲಾದೇಶ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್‌ನ ದತ್ತಾಂಶವು ಕಳೆದ ಆರು ವರ್ಷಗಳಲ್ಲಿ ದೇಶದಲ್ಲಿ ಆದಾಯದ ಅಸಮಾನತೆಯು ಹೆಚ್ಚಾಗಿದೆ ಎಂದು ತೋರಿಸುತ್ತದೆ. ವಿಶ್ವ ಅಸಮಾನತೆಯ 2022ರ ವರದಿ ಪ್ರಕಾರ, ಜನಸಂಖ್ಯೆಯ ಕೇವಲ 1 ಪ್ರತಿಶತದಷ್ಟು ಜನರು ಬಾಂಗ್ಲಾದೇಶದಲ್ಲಿ 16.3 ಶೇಕಡಾ ಸಂಪತ್ತನ್ನು ಹೊಂದಿದ್ದಾರೆ.
ಸಮಾಜದ ಒಂದು ವಿಭಾಗದಿಂದ ಸಂಪತ್ತಿನ ಬಲವರ್ಧನೆಯು ಗಣನೀಯ ರಾಜಕೀಯ ಪ್ರಭಾವದೊಂದಿಗೆ ಒಲಿಗಾರ್ಕ್ಗಳ ವ್ಯವಸ್ಥೆಯನ್ನು ಸೃಷ್ಟಿಸಿದೆ. ಉದಾಹರಣೆಗೆ, 2020ರಲ್ಲಿ, ವ್ಯಂಗ್ಯಚಿತ್ರಕಾರ ಅಹ್ಮದ್ ಕಬೀರ್ ಕಿಶೋರ್ ಅವರನ್ನು ಕುಖ್ಯಾತ ರಾಪಿಡ್ ಆಕ್ಷನ್ ಬೆಟಾಲಿಯನ್ (RAB) ಬಂಧಿಸಿತು. ನಂತರ ಸರ್ಕಾರ ಅವರ ಮೇಲೆ ಕಠಿಣ ಡಿಜಿಟಲ್ ಭದ್ರತಾ ಕಾಯಿದೆ (DSA) ಅಡಿಯಲ್ಲಿ ಮೊಕದ್ದಮೆ ಹೂಡಲಾಯಿತು. ಕಿಶೋರ್ ವಿಡಂಬನಾತ್ಮಕ ವ್ಯಂಗ್ಯಚಿತ್ರದಲ್ಲಿ ಚಿತ್ರಿಸಿದ ಢಾಕಾ ಮೂಲದ ರಾಜಕೀಯವಾಗಿ ಉತ್ತಮ ಸಂಪರ್ಕ ಹೊಂದಿರುವ ಉದ್ಯಮಿಯಿಂದ ಬಂಧನವು ಪ್ರಭಾವಿತವಾಗಿದೆ ಎಂದು ಅವರ ನಿಕಟ ಮೂಲಗಳು ಆರೋಪಿಸಿವೆ.
ಬಾಂಗ್ಲಾದೇಶವೂ ಆದಾಯದ ವಿಚಾರದಲ್ಲಿ ಭಾರತಕ್ಕೆ ಸಮಾನವಾಗಿ ಸ್ಪರ್ಧಿಸುತ್ತಿದೆ. ಅದಲ್ಲದೇ ಟೆಕ್ಸ್ಟೈಲ್ ಉದ್ಯಮದಲ್ಲೂ ಬಾಂಗ್ಲಾದೇಶ ಭಾರತವನ್ನು ಮೀರಿಸುವತ್ತ ಹೆಜ್ಜೆ ಹಾಕುತ್ತಿದೆ. ಬಾಂಗ್ಲಾದೇಶ, ಭಾರತ ಹಾಗೂ ಚೀನಾದ ನಡುಗಳ ನಡುವೆ ಯಾರ ಕಡೆಗೆ ಹೆಚ್ಚು ವಾಲುತ್ತದೆ ಎನ್ನುವುದು ನಿರ್ಣಾಯಕ ವಿಚಾರ ಆಗಿರುತ್ತದೆ.
ಈ ನಡುವೆ ಇನ್ನು ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಹತ್ತಿರದ ಸಂಬಂಧಗಳಿದ್ದು ಬಾಂಗ್ಲಾದೇಶದ ಬಂದರುಗಳನ್ನು ಭಾರತವೂ ಬಳಸುತ್ತಿದೆ. ಈ ಹಿನ್ನೆಲೆಯಲ್ಲಿ ವಿದೇಶಾಂಗ ನೀತಿಯ ವಿಚಾರದಲ್ಲೂ ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದಲ್ಲಿ ಯಾರು ಅಧಿಕಾರಕ್ಕೆ ಏರುತ್ತಾರೆ ಎನ್ನುವುದೂ ಭಾರತಕ್ಕೆ ಬಹುಮುಖ್ಯವಾಗಿ ಇರುತ್ತದೆ. (ಏಜೆನ್ಸೀಸ್)