

ಚಿತ್ರದುರ್ಗ: ಮತದಾನದ ದಿನವೇ ಕೋಟೆ ನಾಡಿನ ಜೆಡಿಎಸ್ ಅಭ್ಯರ್ಥಿಗೆ ಚುನಾವಣಾ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ.
ಚಿತ್ರದುರ್ಗದ ಜೆಡಿಎಸ್ ಅಭ್ಯರ್ಥಿ ಜಿ. ರಘು ಆಚಾರ್ ಅವರ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದು, 58 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. ರಘು ಆಚಾರ್ ಅವರ ಮನೆ ಚಿತ್ರದುರ್ಗ ಹೊರವಲಯದ ಕ್ಯಾದಿಗೆರೆಯಲ್ಲಿದೆ.
ವಿಚಕ್ಷಣಾ ದಳದ ಅಧಿಕಾರಿ ರಾಘವೇಂದ್ರ, ಅಬಕಾರಿ ಅಧಿಕಾರಿ ಇಮ್ರಾನ್, ನೋಡಲ್ ಅಧಿಕಾರಿ ಮಧುಸೂದನ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಮತದಾರರಿಗೆ ಹಂಚಲು ಸಿದ್ಧಪಡಿಸಿದ ಹಣವಿದ್ದ ಕವರ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಸುಮಾರು 50 ಲಕ್ಷ ರೂ.ನಷ್ಟು ಹಣವನ್ನು ಕವರ್ಗಳಲ್ಲಿ ಹಾಕಿಟ್ಟಿದ್ದರು. 8.83 ಲಕ್ಷ ರೂ.ನಷ್ಟು ನಗದು ಮತ್ತೊಂದೆಡೆ ಸಿಕ್ಕಿದೆ. ಅಲ್ಲದೆ, 239 ಲೀಟರ್ ಬಿಯರ್ ಹಾಗೂ 9 ಲೀಟರ್ ಮದ್ಯವನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳ ತಂಡ ತಮ್ಮ ಪರಿಶೀಲನೆಯನ್ನು ಮುಂದುವರಿಸಿದೆ.
ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. (ದಿಗ್ವಿಜಯ ನ್ಯೂಸ್)