More

    ಗ್ರಾಮಪಂಚಾಯತಿಗೆ ಮತಗಟ್ಟೆ ಹೊರೆ?: ಸುತ್ತೋಲೆಗಳಿಂದ ಪಿಡಿಒಗಳು ಸುಸ್ತು

    | ವಿಲಾಸ ಮೇಲಗಿರಿ ಬೆಂಗಳೂರು

    ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಮತಗಟ್ಟೆ ವೆಚ್ಚದ ವಿಚಾರ ಗ್ರಾಮ ಪಂಚಾಯಿತಿ ಹಂತದಲ್ಲಿ ಗೊಂದಲದ ಗೂಡಾಗಿದೆ. ಮತಗಟ್ಟೆಗಳಲ್ಲಿ ಕಲ್ಪಿಸುವ ಸೌಲಭ್ಯಕ್ಕೆ ಯಾರು ವೆಚ್ಚ ಭರಿಸಬೇಕು ಎಂಬುದು ಕಗ್ಗಂಟಾಗಿದೆ. ಹಾಗಾಗಿ ಒಂದೆಡೆ ಗ್ರಾಪಂ ಚುನಾಯಿತ ಪ್ರತಿನಿಧಿಗಳು ತಲೆ ಕೆಡಿಸಿಕೊಂಡರೆ, ಇನ್ನೊಂದೆಡೆ ಪಿಡಿಒಗಳು ಪರದಾಡುವಂತಾಗಿದೆ.

    ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯಡಿ ಚುನಾವಣಾ ಜವಾಬ್ದಾರಿ ಗ್ರಾಮ ಪಂಚಾಯಿತಿಗಳಿಗೆ ಇಲ್ಲದೇ ಇದ್ದರೂ ಅಧಿಕಾರಿಗಳು ಹೊರಡಿಸಿರುವ ಸುತ್ತೋಲೆಗಳು ಗ್ರಾಮ ಪಂಚಾಯಿತಿಗಳನ್ನು ಗಿರಕಿ ಹೊಡೆಸಿವೆ.

    ರಾಜ್ಯದಲ್ಲಿ 6012 ಗ್ರಾಮ ಪಂಚಾಯಿತಿಗಳಿವೆ. ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಲಾಗುವ ಮತಗಟ್ಟೆಗಳಿಗೆ ಮೂಲಸೌಕರ್ಯ ಕಲ್ಪಿಸುವುದು ಮಹತ್ವದ ಜವಾಬ್ದಾರಿ. ಆದರೆ, ಇದರ ಆರ್ಥಿಕ ಹೊರೆ ಯಾರು ಹೊರಬೇಕು ಎಂಬುದರ ಬಗ್ಗೆ ಸ್ಪಷ್ಟ ಸುತ್ತೋಲೆಗಳಿಲ್ಲ. ಒಮ್ಮೆ ಗ್ರಾಮ ಪಂಚಾಯಿತಿಗಳೇ ತಮ್ಮ ಸ್ವಂತ ಸಂಪನ್ಮೂಲದಲ್ಲಿ ವೆಚ್ಚ ಭರಿಸಬೇಕು ಎಂದು ಹೇಳಿದರೆ, ಇನ್ನೊಮ್ಮೆ ಚುನಾವಣೆ ವೆಚ್ಚ ಭರಿಸಲು ಗ್ರಾಮ ಪಂಚಾಯಿತಿಗಳಿಗೆ ಅವಕಾಶವಿರುವುದಿಲ್ಲ. ಚುನಾವಣೆಗೆ ಸಂಬಂಧಿಸಿದ ವೆಚ್ಚಗಳನ್ನು ಜಿಲ್ಲಾ ಚುನಾವಣಾಧಿಕಾರಿ/ ತಹಸೀಲ್ದಾರರಿಂದ ಪಡೆದು ಭರಿಸುವಂತೆ ಸೂಚಿಸಲಾಗಿದೆ. ಹಾಗಾಗಿ ವೆಚ್ಚ ನಿರ್ವಹಣೆ ಗೊಂದಲ ಉಂಟು ಮಾಡಿದೆ.

    ವಿಧಾನಸಭೆ ಚುನಾವಣೆಗೆ ಮತಗಟ್ಟೆಗಳಲ್ಲಿ ಇಳಿಜಾರು ವ್ಯವಸ್ಥೆ(ರ್ಯಾಂಪ್), ಸಮರ್ಪಕ ನಲ್ಲಿ ನೀರಿನ ಸಂಪರ್ಕದೊಂದಿಗೆ ಶೌಚಾಲಯ, ಮತಗಟ್ಟೆಗಳಿಗೆ ವಿದ್ಯುತ್, ಪೀಠೋಪಕರಣ, ಫ್ಯಾನುಗಳು, ಶುದ್ಧ ಕುಡಿಯುವ ನೀರು, ಭೂತಗನ್ನಡಿ, ವಿಶೇಷ ಚೇತನರಿಗೆ ವ್ಹೀಲ್ ಚೇರ್ ಹಾಗೂ ವಿಶೇಷ ಚೇತನರಿಗೆ ಅವಶ್ಯವಿರುವ ಇತರ ಮೂಲಸೌಲಭ್ಯಗಳನ್ನು ಕಲ್ಪಿಸಲು ಗ್ರಾಮ ಪಂಚಾಯಿತಿಗಳಲ್ಲೇ ಲಭ್ಯವಿರುವ ಅನುದಾನ ಹಾಗೂ ಸ್ವಂತ ಸಂಪನ್ಮೂಲಗಳ ಅನುದಾನದಲ್ಲಿ ವೆಚ್ಚ ಭರಿಸಿ ಮತದಾನ ಕೇಂದ್ರಗಳನ್ನು ಸುಸ್ಥಿತಿಯಲ್ಲಿಡುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರು ಜ್ಞಾಪನಾ ಪತ್ರ ಹೊರಡಿಸಿದ್ದರು. ಅಷ್ಟೇ ಅಲ್ಲದೆ, ಮತಗಟ್ಟೆಗಳಿಗೆ ಮೂಲಸೌಕರ್ಯ ಕಲ್ಪಿಸುವುದು ಅತೀ ಜರೂರಾಗಿದೆ. ತಪ್ಪಿದಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆ 1950ರ ರೀತ್ಯಾ ಚುನಾವಣಾ ಕರ್ತವ್ಯ ಲೋಪವೆಂದು ಪರಿಗಣಿಸಿ ಮೇಲಧಿಕಾರಿಗಳಿಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು.

    20 ಸಾವಿರ ರೂಪಾಯಿ ಬಿಲ್ ಕೊಟ್ಟರೆ ಹೇಗೆ?

    ಮತಗಟ್ಟೆಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಶುಚಿತ್ವ, ಶೌಚಾಲಯ, ವಿದ್ಯುತ್ ದೀಪ, ಕುಡಿಯುವ ನೀರುಗಳನ್ನು ಒದಗಿಸಬಹುದು. ಆದರೆ, ಸಖಿ ಮತಗಟ್ಟೆ, ಮತದಾರರಿಗೆ ನೆರಳು ಕಲ್ಪಿಸಲು ಶಾಮಿಯಾನ, ಮತಗಟ್ಟೆ ವಿಶೇಷ ಅಲಂಕಾರ, ಚಿತ್ರ ಮತ್ತು ಮಾರ್ಗಸೂಚಿ ಫಲಕ ಬರೆಸುವುದು, ವ್ಹೀಲ್ ಚೇರ್, ಭೂತಗನ್ನಡಿ ಮತ್ತಿತರ ಸವಲತ್ತುಗಳಿಗೆ ಯಾರು ಹಣ ಭರಿಸಬೇಕು ಎಂಬುದು ಗ್ರಾಮ ಪಂಚಾಯಿತಿ ಹಂತದಲ್ಲಿ ಸ್ಪಷ್ಟತೆ ಇಲ್ಲದಾಗಿದೆ. ಅನೇಕ ಕಡೆ ಮತಗಟ್ಟೆಗಳಿಗೆ ಚಿತ್ರ ಬರೆದು 20 ಸಾವಿರ ರೂ. ಬಿಲ್ ಕೊಟ್ಟು ಹೋಗಿದ್ದಾರೆ. ವ್ಹೀಲ್ ಚೇರ್ ತರಿಸಲು ದುಡ್ಡಿಲ್ಲದ ಪರಿಸ್ಥಿತಿ ಇದೆ ಎಂದು ಹಲವು ಗ್ರಾಪಂ ಸದಸ್ಯರು ಅಲವತ್ತುಕೊಂಡಿದ್ದಾರೆ. ಅಧಿಕಾರಿಗಳ ಒತ್ತಡಕ್ಕೆ ಮಣಿದು ತರಿಸಿದರೂ ಮತದಾನದ ಬಳಿಕ ಬಿಲ್ ಪಾವತಿ ಮಾಡುವವರು ಯಾರು ಎಂದು ಕೆಲವರು ಪ್ರಶ್ನಿಸುತ್ತಾರೆ.

    ಗ್ರಾಪಂಗಳಲ್ಲಿ ಸಂಪನ್ಮೂಲ ಕೊರತೆ: ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಆರ್ಥಿಕ ಸಂಪನ್ಮೂಲದ ಕೊರತೆಯಿಂದ ಮೂಲಸೌಕರ್ಯ ಕಲ್ಪಸುವಲ್ಲಿ ವಿಳಂಬ ಕೂಡ ಆಗಿತ್ತು. ಈ ಬಗ್ಗೆ ಅನೇಕ ಗ್ರಾಪಂಗಳು ಸರ್ಕಾರದ ಗಮನಕ್ಕೂ ತಂದವು. ಬಳಿಕ ಎಚ್ಚೆತ್ತ ಸರ್ಕಾರ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ವೆಚ್ಚ ಭರಿಸಲು ಗ್ರಾಮ ಪಂಚಾಯಿತಿಗಳಿಗೆ ಅವಕಾಶವಿರುವುದಿಲ್ಲ. ಜಿಲ್ಲಾ ಚುನಾವಣಾಧಿ ಕಾರಿ/ ತಹಸೀಲ್ದಾರರಿಂದ ಪಡೆದು ವೆಚ್ಚ ಭರಿಸಲು ಸೂಚಿಸಲಾಗಿದೆ. ಆದರೆ, ಇನ್ನೂ ಹಲವೆಡೆ ಗ್ರಾಮ ಪಂಚಾಯಿತಿಗಳೇ ಭರಿಸಬೇಕೆಂಬ ಒತ್ತಡ ಗ್ರಾಮ ಪಂಚಾಯಿತಿ ಪಿಡಿಒಗಳ ಮೇಲಿದೆ ಎನ್ನಲಾಗಿದೆ.

    ಮೂಲಸೌಭ್ಯಗಳನ್ನು ಆಯಾ ಇಲಾಖೆಗಳು ವೆಚ್ಚ ಭರಿಸಿ ಒದಗಿಸಬೇಕಾಗುತ್ತದೆ. ಶಾಮಿಯಾನ, ವ್ಹೀಲ್ ಚೇರ್, ಮತಗಟ್ಟೆ ಅಲಂಕಾರ ವೆಚ್ಚವನ್ನು ಜಿಲ್ಲಾ ಚುನಾವಣಾಧಿ ಕಾರಿಗಳು ಭರಿಸುತ್ತಾರೆ.

    | ವೆಂಕಟೇಶ್ ಕುಮಾರ್, ಅಪರ ಮುಖ್ಯ ಚುನಾವಣಾಧಿಕಾರಿ.

    ಮತಗಟ್ಟೆಗಳಲ್ಲಿ ಮತದಾರರಿಗೆ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಅಧಿಕಾರಿಗಳಲ್ಲೇ ಸ್ಪಷ್ಟತೆ ಇಲ್ಲ. ಅನೇಕ ಕಡೆ ಮತಗಟ್ಟೆಗಳಿಗೆ ಚಿತ್ರ ಬರೆದು 20 ಸಾವಿರ ರೂ. ಬಿಲ್ ಕೊಟ್ಟು ಹೋಗಿದ್ದಾರೆ. ಇಂತಹ ಬಿಲ್ ಪಾವತಿ ಸಲು ಗ್ರಾಪಂಗಳಲ್ಲಿ ಹಣವೇ ಇಲ್ಲ.

    | ಕಾಡಶೆಟ್ಟಿಹಳ್ಳಿ ಸತೀಶ್, ಅಧ್ಯಕ್ಷರು, ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ

    ಕಾಯ್ದೆಯಲ್ಲೇ ಅವಕಾಶವಿಲ್ಲ: ಬಜೆಟ್​ನಲ್ಲಿ ಅನುಮೋದನೆ ಪಡೆಯದೇ ಹಣ ಖರ್ಚು ಮಾಡಲು ಅವಕಾಶವಿಲ್ಲ. ನಾವು ಮೊದಲೇ ಬಜೆಟ್​ನಲ್ಲಿ ಚುನಾವಣಾ ವೆಚ್ಚಕ್ಕೆ ಅವಕಾಶ ಮಾಡಿಕೊಂಡಿಲ್ಲ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯಡಿ ಚುನಾವಣೆ ಜವಾಬ್ದಾರಿ ನಮಗೆ ಬರುವುದಿಲ್ಲ. ಹಾಗಿದ್ದೂ ಈ ವಿಚಾರದಲ್ಲಿ ಸ್ಪಷ್ಟತೆ ಇಲ್ಲ ಎಂದು ಗ್ರಾಪಂಗಳು ಹೇಳುತ್ತವೆ.

    ಕನಿಷ್ಠ ಎಂಬುದಕ್ಕೆ ವ್ಯಾಖ್ಯಾನವಿಲ್ಲ: ಸುತ್ತೋಲೆಯಲ್ಲಿ ಕನಿಷ್ಠ ಸೌಕರ್ಯ ಕಲ್ಪಿಸುವಂತೆ ಸೂಚಿಸಲಾಗಿದೆ. ಕನಿಷ್ಠ ಎಂದರೆ ಏನು ಎಂಬುದಕ್ಕೆ ವ್ಯಾಖ್ಯಾನವಿಲ್ಲ ಎಂಬುದು ಗ್ರಾ.ಪಂ.ಗಳ ಅಳಲು.

    ಮತದಾರರಲ್ಲಿ ಮತಗಟ್ಟೆ ಕುರಿತು ಜಾಗೃತಿ ಮೂಡಿಸುವ ದೃಷ್ಟಿಯಿಂದ ‘ನಮ್ಮ ನಡೆ ಮತಗಟ್ಟೆ ಕಡೆ’ ಕಾರ್ಯಕ್ರಮವನ್ನು ಏ.30 ನಡೆಸಲಾಯಿತು. ಇದಕ್ಕೆ ಬಾವುಟ ಸಿದ್ಧಪಡಿಸಿ ಧ್ವಜಾರೋಹಣ ನೆರವೇರಿಸುವುದು, ಹಮ್ಮಿಕೊಂಡ ಕಾರ್ಯಕ್ರಮದ ಭಾವಚಿತ್ರ/ವಿಡಿಯೋಗಳನ್ನು ಮುಖ್ಯ ಚುನಾವಣಾಧಿಕಾರಿಗಳ ಸಾಮಾಜಿಕ ಜಾಲತಾಣಗಳಿಗೆ ಟ್ಯಾಗ್ ಮಾಡಬೇಕು ಮತ್ತು ಹಂಚಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಆದರೆ, ಇದಕ್ಕೆ ತಗುಲುವ ವೆಚ್ಚದ ಬಗ್ಗೆ ಎಲ್ಲೂ ಉಲ್ಲೇಖವನ್ನೇ ಮಾಡಿಲ್ಲ. ಹೀಗಾಗಿ ಈ ಕುರಿತು ಗ್ರಾಪಂಗಳು ಸ್ಪಷ್ಟತೆಯ ನಿರೀಕ್ಷೆಯಲ್ಲಿವೆ.

    ಸುಮ್ಮನಿರುವ ಇವರಿಗಿದೆ ಚುನಾವಣಾ ಫಲಿತಾಂಶವನ್ನೇ ಬದಲಿಸುವ ಶಕ್ತಿ!; ಇವರ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts