ಚೆನ್ನೈ: ನಟ ಪ್ರಜ್ವಲ್ ದೇವರಾಜ್ ಅಭಿನಯದ ಗಂಗೆ ಬಾರೆ ತುಂಗೆ ಬಾರೆ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಸುನೈನಾ, ಚಂದನವನದಲ್ಲಿ ಕೇವಲ ಒಂದೇ ಸಿನಿಮಾಗೆ ಸೀಮಿತವಾದರು. ಇದಾದ ಬಳಿಕ ತಮಿಳು, ತೆಲುಗು ಚಿತ್ರರಂಗದಲ್ಲಿ ಸುನೈನಾ ಗುರುತಿಸಿಕೊಂಡರು. ಇತ್ತೀಚೆಗಷ್ಟೇ ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ಖಚಿತಪಡಿಸುವ ಮೂಲಕ ಸುನೈನಾ ಭಾರಿ ಸುದ್ದಿಯಾಗಿದ್ದರು. ಆದರೆ, ಯಾರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ನೀಡಿರಲಿಲ್ಲ. ಇದೀಗ ಹೊಸದೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ತಾಜಾ ಸಂಗತಿ ಏನೆಂದರೆ, ಸುನೈನಾ ಅವರು ದುಬೈ ಮೂಲದ ಖ್ಯಾತ ಯೂಟ್ಯೂಬರ್ ಖಲೀದ್ ಅಲ್ ಅಮೇರಿ ಅವರನ್ನು ಮದುವೆಯಾಗಲಿದ್ದಾರೆ ಎಂದು ಸುದ್ದಿ ಹಲವು ವೆಬ್ಸೈಟ್ಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾಲಿವುಡ್ ಗಲ್ಲಿಯಲ್ಲೂ ಭಾರಿ ಚರ್ಚೆಯಾಗುತ್ತಿದೆ.
ಕಳೆದ ತಿಂಗಳು ಜೂನ್ 5ರಂದು ಸುನೈನಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೈ ಕೈ ಹಿಡಿದಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಆದರೆ, ಯಾವುದೇ ಅಡಿಬರಹವನ್ನು ನೀಡಿರಲಿಲ್ಲ. ಸುನೈನಾ ಅವರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಆದರೆ, ಕೈ ಹಿಡಿದಿರುವ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಿರುವಾಗ ಜೂನ್ 26ರಂದು ಯೂಟ್ಯೂಬರ್ ಖಲೀದ್ ವಜ್ರದ ಉಂಗುರವನ್ನು ಧರಿಸಿರುವ ಹುಡುಗಿಯ ಕೈಯನ್ನು ಹಿಡಿದಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಇಬ್ಬರ ನಿಶ್ಚಿತಾರ್ಥದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದೆ. ಸದ್ಯದಲ್ಲೇ ಸುನೈನಾ ಮತ್ತು ಖಾಲಿದ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಗಮನಾರ್ಹ ಸಂಗತಿ ಏನೆಂದರೆ, ಖಾಲಿದ್ ಅವರ ಮಾಜಿ ಪತ್ನಿ ಸಲಾಂ ಮೊಹಮದ್ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ನಲ್ಲಿ ಕಳೆದ ಫೆಬ್ರವರಿ 14ರಂದು ತಮ್ಮ ವಿಚ್ಛೇದನವನ್ನು ಅಂತಿಮಗೊಳಿಸಿರುವುದಾಗಿ ಬಹಿರಂಗಪಡಿಸಿದರು. ಖಲೀದ್ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪದವೀಧರ. ಖಲೀದ್ ಮತ್ತು ಸಲಾಂ ಒಂದು ಕಾಲದಲ್ಲಿ ಮಧ್ಯಪ್ರಾಚ್ಯದಲ್ಲಿ ಸ್ಟಾರ್ ಜೋಡಿಯಾಗಿ ಹೆಸರು ಮಾಡಿದರು. ಆದರೆ, ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿ, ಬೇರೆಯಾಗಿದ್ದಾರೆ.
ಇನ್ನು ಹೈದರಾಬಾದ್ ಮೂಲದವರಾದ ಸುನೈನಾಗೆ 2008 ರಿಂದ ತಮಿಳು ಚಿತ್ರರಂಗದಲ್ಲಿ ಸರಣಿ ಅವಕಾಶಗಳು ಬಂದವು. ಇತ್ತೀಚೆಗೆ ಅಮೆಜಾನ್‌ನಲ್ಲಿ ಪ್ರೈಮ್‌ನಲ್ಲಿ ಬಂದ ‘ಇನ್‌ಸ್ಪೆಕ್ಟರ್ ರಿಷಿ’ ವೆಬ್ ಸರಣಿಯಲ್ಲಿ ಕೊನೆಯದಾಗಿ ನಟಿಸಿದರು. (ಏಜೆನ್ಸೀಸ್)
ಅಹಂಕಾರ ತಲೆಗೆ ಏರಿದರೆ ಆ ದೇವರೇ ಕೆಳಗೆ ಬೀಳಿಸ್ತಾನೆ ನನಗೂ ಅದೇ ಆಗಿದ್ದು! ಕೊಹ್ಲಿ ಶಾಕಿಂಗ್ ಹೇಳಿಕೆ
ಇದನ್ನು ಸಾಧಿಸಲೇಬೇಕು… ಕೋಚ್ ಹುದ್ದೆ ತೊರೆಯುವಾಗ ಕೊಹ್ಲಿಗೆ ಮತ್ತೊಂದು ಟಾರ್ಗೆಟ್ ನೀಡಿದ ದ್ರಾವಿಡ್!