ನವದೆಹಲಿ: ಮನುಷ್ಯ ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸಬೇಕು. ಬದಲಾಗಿ ಸಣ್ಣಪುಟ್ಟ ಗೆಲುವಿನಲ್ಲಿ ಮುಳುಗಿ ಹೆಮ್ಮೆಪಟ್ಟರೆ ಅವನ ಅವನತಿ ಅಲ್ಲಿಂದ ಶುರುವಾಗುತ್ತದೆ. ಇದು ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ ಕೂಡ. ಆದುದರಿಂದಲೇ ಯಶಸ್ಸಿನ ನಂತರ ನಾವು ನಡೆದುಬಂದು ಹಾದಿಯನ್ನು ಒಮ್ಮೆ ಹಿಂತಿರುಗಿ ನೋಡಬೇಕು ಎಂದು ಹಿರಿಯರು ಹೇಳುತ್ತಾರೆ. ಎಚ್ಚರಿಕೆ ಹೆಜ್ಜೆ, ತೂಕದ ಮಾತುಗಳು, ನಯ ಹಾಗೂ ವಿನಯ ಎಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಮುನ್ನಡೆಯುವವನು ವಿಜಯಶಾಲಿಯಾಗುತ್ತಾನೆ. ಇಲ್ಲವಾದಲ್ಲಿ ಸೋಲು ನಿಶ್ಚಿತ. ಅಷ್ಟಕ್ಕೂ ಇಷ್ಟೆಲ್ಲ ಪೀಠಿಕೆಯನ್ನು ಯಾಕೆ ಹೇಳುತ್ತಿದ್ದೇನೆ ಎಂದು ನೀವು ಯೋಚಿಸುತ್ತಿರಬಹುದು. ಅದೇನೆಂದರೆ, ನಿನ್ನಷ್ಟಕ್ಕೆ ನೀನು ಹೆಮ್ಮೆಪಟ್ಟರೆ ಅಥವಾ ಅಹಂ ತೋರಿದರೆ ದೇವರು ನಿನ್ನನ್ನು ಕೆಳಗೆ ಬೀಳಿಸುತ್ತಾನೆ. ನನ್ನ ವಿಚಾರದಲ್ಲೂ ಅದೇ ಕೂಡ ನಡೆಯಿತು ಎಂದು ವಿರಾಟ್ ಕೊಹ್ಲಿ ಅಚ್ಚರಿಯ ಕಾಮೆಂಟ್ಗಳನ್ನು ಮಾಡಿದ್ದಾರೆ.
ವಿರಾಟ್ ಕೊಹ್ಲಿ ಅವರನ್ನು ಟೀಮ್ ಇಂಡಿಯಾದ ರನ್ ಮೆಷಿನ್ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ದಾಖಲೆಗಳ ಮೇಲೆ ದಾಖಲೆಗಳನ್ನು ಮುರಿಯುತ್ತಿದ್ದಾರೆ. ಕಳೆದ ಮೇ ತಿಂಗಳಲ್ಲಿ ಮುಕ್ತಾಯವಾದ ಐಪಿಎಲ್ 2024 ಋತುವಿನಲ್ಲಿ ರನ್ಗಳ ಪ್ರವಾಹವನ್ನು ಹರಿಸಿದ್ದರು. ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಬ್ಯಾಟ್ಸ್‌ಮನ್ ಆಗುವ ಮೂಲಕ ಕೊಹ್ಲಿ ಆರೆಂಜ್ ಕ್ಯಾಪ್ ಗೆದ್ದರು.
ಆದರೆ, ಇದೇ ವೇಗವನ್ನು ಟಿ20 ವಿಶ್ವಕಪ್‌ನಲ್ಲೂ ಮುಂದುವರಿಸುತ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಅವರ ನಿರೀಕ್ಷೆ ತಲೆಕೆಳಗಾಗಿತ್ತು. ಈ ಮೆಗಾ ಟೂರ್ನಿಯಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ವಿರಾಟ್ ಲೀಗ್ ಹಾಗೂ ಸೂಪರ್ 8 ಪಂದ್ಯಗಳಲ್ಲಿ ದಯನೀಯವಾಗಿ ವಿಫಲರಾಗಿದ್ದರು. ಫೈನಲ್ ಪಂದ್ಯಕ್ಕೂ ಮುನ್ನ 7 ಪಂದ್ಯಗಳಲ್ಲಿ ಕೇವಲ 75 ರನ್ ಗಳಿಸಿದ್ದರು. ಆದರೆ ನಿರ್ಣಾಯಕ ಅಂತಿಮ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಮತ್ತೆ ಫಾರ್ಮ್ಗೆ ಮರಳಿದರು.
ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಅಹಂಕಾರ ತಲೆಗೆ ಏರಿದರೆ ಆ ದೇವರೇ ಕೆಳಗೆ ಬೀಳಿಸುತ್ತಾನೆ ಎಂದು ಅನಿರೀಕ್ಷಿತ ಕಾಮೆಂಟ್ ಮಾಡಿದ್ದಾರೆ. ನಿಜ ಹೇಳಬೇಕೆಂದರೆ ನನ್ನ ಹಳೆಯ ಕನಸು ನನಸಾಗುತ್ತದೆ ಎಂದು ನಾನು ನಂಬಿರಲಿಲ್ಲ. ಅದೇ ರೀತಿ ನಾನು ಟೂರ್ನಮೆಂಟ್ನಲ್ಲಿ ಆಡಿದ್ದನ್ನು ಪರಿಗಣಿಸಿದರೆ, ಈ ವಿಶ್ವಕಪ್ ನನಗೆ ಒಂದು ಶ್ರೇಷ್ಠ ಪಾಠವಾಗಿದೆ. ನನ್ನ ಅಹಂ ಅನ್ನು ಬದಿಗೆ ಇಟ್ಟು ನಿಜ ಹೇಳುವುದಾದರೆ, ನಾನೇ ಎಲ್ಲ ನಾನು ಯಾವುದೇ ಅಚ್ಚರಿಗಳನ್ನು ಬೇಕಾದರೂ ಮಾಡಬಲ್ಲೆ ಅಂದುಕೊಂಡಲ್ಲಿ, ನಾನು ಏನೇನು ಅಲ್ಲ. ಒಂದು ಕ್ಷಣದಲ್ಲಿ ಎದುರಾದ ಪರಿಸ್ಥಿತಿಗೆ ಗೌರವಿಸಿ, ತಲೆಬಾಗಲೇ ಬೇಕು. ನಿನ್ನಷ್ಟಕ್ಕೆ ನೀನು ಹೆಮ್ಮೆಪಟ್ಟರೆ, ಅಹಂ ತೋರಿದರೆ ನಾನು ನಿನ್ನನ್ನು ಕಳಗೆ ಎಳೆಯುತ್ತೇನೆ ಮತ್ತು ನಿನ್ನನ್ನು ಎಲ್ಲಿ ಇಡಬೇಕು ಅಲ್ಲಿ ಇಡುತ್ತೇನೆ ಎಂದು ದೇವರು ಹೇಳುತ್ತಾನೆ. ನನ್ನ ವಿಚಾರದಲ್ಲೂ ಕೂಡ ಅದೇ ಆಯಿತು ಎಂದು ಕೊಹ್ಲಿ ಮುಕ್ತವಾಗಿ ಹೇಳಿಕೊಂಡರು.
ಈ ಪಂದ್ಯಾವಳಿಯ ಮೊದಲು ನಾನು ಉತ್ತಮ ಪ್ರದರ್ಶನ ನೀಡಿದ್ದೆ. ಬಹುಶಃ ನಾನು ಏನನ್ನಾದರೂ ಸಾಧಿಸುತ್ತೇನೆ ಎಂದು ನಂಬಿದ್ದೆ. ನನ್ನಲ್ಲಿ ಅಹಂಕಾರ ಹೆಚ್ಚಾಗಿದೆ ಎಂದು ನಾನು ಭಾವಿಸುತ್ತೇನೆ. ಆ ದೇವರು ನನ್ನನ್ನು ಕೆಳಗಿಳಿಸಿದ್ದಾನೆ. ಈ ಟೂರ್ನಿಯಲ್ಲಿ ಬಾಲ್ ಸ್ವಿಂಗ್ ಹೆಚ್ಚು ಆಯಿತು, ಎಂದು ವಿರಾಟ್ ಕೊಹ್ಲಿ ಹೇಳಿದರು. ಯಾವುದೇ ವ್ಯಕ್ತಿ ಬೆಳೆಯಬೇಕು ಎಂಬ ಉದ್ದೇಶದಿಂದ ತಮ್ಮ ಅನುಭವಗಳನ್ನು ಒಟ್ಟುಗೂಡಿಸಿ ಕೊಹ್ಲಿ ಈ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಈ ಕಾಮೆಂಟ್‌ಗಳು ಕ್ರೀಡಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಅಲ್ಲದೆ, ಉತ್ತಮ ಸಂದೇಶ ಎಂದು ಕೊಹ್ಲಿಯನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. (ಏಜೆನ್ಸೀಸ್)
Virat Kohli opens up about his tournament 🥺
LOVE YOU VIRAT KOHLI ♥️#ThankYouVirat @imVkohli pic.twitter.com/3jzlOOSJ0A
— VK (@Vtweets21) June 29, 2024
ರೋಹಿತ್ ಶರ್ಮ-ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಮಹತ್ವದ ಘೋಷಣೆ ಮಾಡಿದ ಜಯ್ ಷಾ!
ರೋಹಿತ್ ಶರ್ಮರ ವಿಭಿನ್ನ ಸಂಭ್ರಮಾಚರಣೆ ಹಿಂದಿನ ಅರ್ಥವೇನು? ಕಪ್ ಗೆದ್ದ ನಂತ್ರ ಯಾಕೆ ಹೀಗೆ ಮಾಡಿದ್ರು?