ಫೇಸ್​ಬುಕ್​ನಲ್ಲಿ ಡ್ರೋನ್ ಪ್ರತಾಪ್ ಫ್ಯಾನ್ಸ್ ಕ್ಲಬ್ ತೆರೆದಿದ್ದು ಅಭಿಮಾನಿಗಳೋ, ಪ್ರತಾಪನೋ?

Prathap
Published on

ಬೆಂಗಳೂರು: ಮರುಬಳಕೆ ವಸ್ತುಗಳಿಂದ ಡ್ರೋನ್ ತಯಾರಿಸಿರುವುದಾಗಿ ಹೇಳಿ ಪ್ರಸಿದ್ಧಿಯ ಶಿಖರವೇರಿ ಇತ್ತೀಚೆಗಷ್ಟೆ ನಿಜ ಬಣ್ಣ ಬಯಲಾಗಿರುವ ಡ್ರೋನ್ ಪ್ರತಾಪ್ ಹೆಸರಿನಲ್ಲಿ ಫ್ಯಾನ್ಸ್ ಕ್ಲಬ್ ಒಂದು ಫೇಸ್‌ಬುಕ್‌ನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದು ಈ ವರ್ಷದ ಜನವರಿಯಲ್ಲೇ ಜೀವ ತಳೆದಿದ್ದರೂ ಡ್ರೋನ್ ಪ್ರತಾಪ್‌ನ ಕುರಿತು ಫ್ಯಾಕ್ಟ್ ಚೆಕ್ ವರದಿ ಪ್ರಕಟವಾದ ನಂತರ, ಅಂದರೆ ಕಳೆದ 3-4 ದಿನಗಳಿಂದ ಚುರುಕಾಗಿದೆ.

ಮೇ-ಜೂನ್‌ವರೆಗೆ ಆಗೊಂದು ಈಗೊಂದು ಪೋಸ್ಟ್ ಅಪ್‌ಡೇಟ್ ಆಗುತ್ತಿದ್ದ ಈ ಪೇಜ್‌ನಲ್ಲಿ ಕೆಲವು ದಿನಗಳಿಂದ ದಿಢೀರನೆ ಪ್ರತಾಪ್ ಪರ ಪೋಸ್ಟ್‌ಗಳು ಪದೇಪದೆ ಕಾಣಿಸಿಕೊಳ್ಳುತ್ತಿವೆ. ಇದರಿಂದಾಗಿ ಆ ಪೇಜ್ ಫಾಲೋ ಮಾಡುತ್ತಿರುವವರಲ್ಲಿ ಅನುಮಾನ ಹುಟ್ಟಿಕೊಂಡಿದೆ. ಈ ಪೇಜನ್ನು ಪ್ರತಾಪ್ ಅಭಿಮಾನಿಗಳು ನಿರ್ವಹಿಸುತ್ತಿದ್ದಾರೋ ಅಥವಾ ಸ್ವತಃ ಪ್ರತಾಪ್ ಎಲ್ಲೋ ಅಜ್ಞಾತ ಸ್ಥಳದಲ್ಲಿ ಕುಳಿತು ನಿರ್ವಹಿಸುತ್ತಿದ್ದಾನೋ ಎಂಬ ಶಂಕೆ ಕಾಡಿದೆ. ಇದನ್ನು ನೆಟ್ಟಿಗರು ಅದೇ ಪೇಜ್‌ನಲ್ಲಿ ಪ್ರಶ್ನಿಸುತ್ತಿರುವುದು ಗಮನಾರ್ಹವಾಗಿದೆ.

ವಿವಿಧ ಕಾಲೇಜು-ಮಠಗಳಲ್ಲಿ ಮಾಡಿದ ಸನ್ಮಾನಗಳು, ಪ್ರೇರಣಾತ್ಮಕ ಭಾಷಣಗಳ ವಿಡಿಯೋ, ಪ್ರಶಂಸಾತ್ಮಕವಾಗಿ ಬರೆದ ಪತ್ರಿಕಾವರದಿಗಳ ತುಣುಕುಗಳು, ವಿದೇಶಕ್ಕೆ ಹೋದಾಗ ತೆಗೆಸಿಕೊಂಡ ಫೋಟೋಗಳು, ಅಲ್ಲಿಯ ಭಾರತೀಯರನ್ನು ಭೇಟಿ ಮಾಡಿದ ವಿಡಿಯೋ ಮುಂತಾದವುಗಳನ್ನು ಇಲ್ಲಿ ಈಗ ನಿಯಮಿತವಾಗಿ ಅಪ್‌ಡೇಟ್ ಮಾಡಲಾಗುತ್ತಿದೆ. ಈಗ ಸ್ವಲ್ಪ ಹೊತ್ತಿಗೆ ಮೊದಲು ಈ ಪೇಜ್‌ನಲ್ಲಿ ಕೋವಿಡ್‌ಕೇರ್ ಹೆಲ್ಪ್‌ಲೈನ್ ನಂಬರ್‌ಗಳನ್ನೂ ಅಪ್‌ಡೇಟ್ ಮಾಡಲಾಗಿದೆ. ಇದಕ್ಕೆ ಜನರು ಅಲ್ಲೇ ಚಳಿ ಬಿಡಿಸುತ್ತಿದ್ದಾರೆ.

‘‘ಈ ಪೇಜ್ ನೋಡಿದ್ರೆ ಇದನ್ನು ನೀನೇ ಎಲ್ಲೋ ಕೂತ್ಕೊಂಡು ನೋಡ್ಕೊತಾ ಇದೀಯಾ ಅನ್ಸುತ್ತೆ. ಬೇರೆ ಯಾರೋ ಅಭಿಮಾನಿಗಳು ಮಾಡಿದ ಪೇಜ್ ಅಲ್ಲ ಇದು... ಯಾರೂ ಅಭಿಮಾನಿಗಳೇ ಇಲ್ಲ...’’ ಎಂದು ಮುಂತಾಗಿ ಜನರು ಪ್ರಶ್ನಿಸುತ್ತಿದ್ದಾರೆ. ‘‘ಆಗಲೇ ನಾಲ್ಕು ದಿನ ಆಯ್ತು, ಇನ್ನೂ ಯಾವಾಗ ನಿನ್ನ ಸರ್ಟಿಫಿಕೇಟ್‌ಗಳನ್ನು ತೋರಿಸ್ತೀಯಾ? ಯಾವಾಗ ಹೊರಗೆ ಬರ‌್ತೀಯಾ?’’ ಎಂದೂ ಕೇಳುತ್ತಿದ್ದಾರೆ. ಇದೆಲ್ಲಕ್ಕೂ ಕೆಲವೆಡೆ ಉತ್ತರ ಬರುತ್ತಿದೆ. ಇನ್ನುಳಿದಂತೆ ಮೌನವೇ ಉತ್ತರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net