More

    ಕೆರೆ ಕಾಮೇಗೌಡರ ಕಿರಿಕ್​ಗೆ ಸಿಡಿದೆದ್ದ ದಾಸನದೊಡ್ಡಿ ಜನತೆ

    ಮಂಡ್ಯ/ಮಳವಳ್ಳಿ: ಅರಣ್ಯ ಪ್ರದೇಶವೇ ತನ್ನದೆಂಬಂತೆ ದರ್ಪ ಪ್ರದರ್ಶನ ಮಾಡುತ್ತ, ಗ್ರಾಮದ ಜನರಿಗೆ ಕಿರುಕುಳ ನೀಡುತ್ತಿರುವ ಕಾಮೇಗೌಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮಸ್ಥರು ಸೋಮವಾರ ಸಂಜೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಗ್ರಾಮದಿಂದ ಆಗಮಿಸಿದ್ದ 15ಕ್ಕೂ ಹೆಚ್ಚು ಜನರು ಕಾಮೇಗೌಡರು ಯಾವುದೇ ಕೆರೆ ಕಟ್ಟಲಿಲ್ಲ. ಒಂದೆರಡು ಕಟ್ಟೆ ನಿರ್ವಿುಸಿದ್ದಾರೆ ಅಷ್ಟೇ. ರಸ್ತೆ ಕಾಮಗಾರಿ ನಡೆಸಲು ಮಣ್ಣು ತುಂಬಿಕೊಂಡ ಜಾಗಗಳು ಗುಂಡಿಗಳಾಗಿದ್ದು, ಅದನ್ನೇ ಆತ ತಾನು ಕಟ್ಟೆ ಮಾಡಿಸಿರುವುದಾಗಿ ಹೇಳಿಕೊಳ್ಳುತ್ತಿದ್ದಾನೆ. ಇದರಿಂದಾಗಿ ಆತನಿಗೆ ಸಾಕಷ್ಟು ಪ್ರಶಸ್ತಿ, ಗೌರವ ಸಿಕ್ಕಿದೆ ಎಂದು ಆರೋಪಿಸಿದರು. ಮರಳು ಕಳ್ಳತನ, ಬೇರೆಯವರ ಫಸಲನ್ನು ಮೇಯಿಸಿ, ಜಮೀನಿನ ಮಾಲೀಕರ ಮೇಲೆಯೇ ದಬ್ಬಾಳಿಕೆ ಮಾಡಿದ ಸಾಕಷ್ಟು ಆರೋಪಗಳು ಕಾಮೇಗೌಡರ ಮೇಲಿವೆ ಎಂದು ದೂರಿದರು. ಕೆರೆಗಳನ್ನು ಕಟ್ಟಿಸಿದ್ದಾಗಿ ಯಾರೋ ಹೇಳಿದರೆಂದು ನಂಬಿ ಪ್ರಶಸ್ತಿ ನೀಡುವ ಮೊದಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೀರಾ? ಗ್ರಾಮದ ಜನರಿಗೆ ಆತ ಕಿರುಕುಳ ನೀಡುವ ಬಗ್ಗೆ ಗ್ರಾಮಸ್ಥರನ್ನು ಕೇಳಿದ್ದೀರಾ ಎಂದು ಪ್ರಶ್ನಿಸಿದ ಅವರು, ಈ ಎಲ್ಲದರ ಬಗ್ಗೆ ತಕ್ಷಣ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಕೃಷ್ಣಯ್ಯ ಅವರಿಗೆ ಮನವಿ ಸಲ್ಲಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಕುಮಾರ್, ಶಶಿಕುಮಾರ್, ಕೆಂಪೇಗೌಡ, ರಾಜು, ಗಂಗಾಧರ್, ಅನಿಲ್​ಕುಮಾರ್, ಮಾದೇಗೌಡ, ಶಿವಕುಮಾರ್ ಮೊದಲಾದವರಿದ್ದರು.

    ಅಮಾಯಕನ ಮೇಲೆ ಎಫ್​ಐಆರ್

    ಮಳವಳ್ಳಿ: ಕಾಮೇಗೌಡರ ವಿರುದ್ಧ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆಂದು ಸಂತೋಷ್ ಎಂಬ ಯುವಕನ ವಿರುದ್ಧ ಸುಳ್ಳು ಸಾಕ್ಷಿ ಸೃಷ್ಟಿಸಿ, ಬೆಳಕವಾಡಿ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಕುರಿ ಮೇಯಿಸಲು ತಾನು ಬೆಟ್ಟಕ್ಕೆ ಹೋಗುತ್ತಿದ್ದ ವೇಳೆ ಸಂತೋಷ್ ಎಂಬಾತ ಬೈಕ್​ನಲ್ಲಿ ಬಂದು ಉದ್ದೇಶಪೂರ್ವಕವಾಗಿ ಅಪಘಾತ ಮಾಡಿದನೆಂದು ಕಾಮೇಗೌಡರ ಪುತ್ರ ಸುರೇಶ್ ದೂರು ನೀಡಿದ್ದರು. ಆ ಮೇರೆಗೆ ಸೋಮವಾರ ಬೆಳಕವಾಡಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹಿಸಿ ಸುರೇಶ್​ಗೆ ತಿಳಿಹೇಳಿ ವಾಪಸ್ಸಾಗಿದ್ದರು. ಆದರೆ, ಮಂಗಳವಾರ ಸಂತೋಷ್​ನನ್ನು ಠಾಣೆಗೆ ಕರೆಸಿಕೊಂಡು, ನೀನು ಅಪಘಾತ ಮಾಡಿದ್ದಕ್ಕೆ ಸಾಕ್ಷಿ ಇರುವುದಾಗಿ ಹೇಳಿ, ಬೈಕನ್ನು ವಶಕ್ಕೆ ಪಡೆದು ಎಫ್​ಐಆರ್ ದಾಖಲಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಎಸಿ ಶಾಂತಿ ಸಭೆ

    ತನಗೆ ಗ್ರಾಮಸ್ಥರು ತೊಂದರೆ ಕೊಡುತ್ತಾರೆಂದು ಕಾಮೇಗೌಡ ದೂರಿದರೆ, ಕಾಮೇಗೌಡರೇ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿರುವ ಹಿನ್ನೆಲೆಯಲ್ಲಿ, ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ಬುಧವಾರ ಶಾಂತಿ ಸಭೆ ಏರ್ಪಡಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಸೂರಜ್ ತಿಳಿಸಿದ್ದಾರೆ. ಕೋವಿಡ್ ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಪರೆನ್ಸ್ ನಡೆಸಿದ ಸಂದರ್ಭದಲ್ಲಿ ಕಾಮೇಗೌಡರ ಆರೋಗ್ಯ ಕುರಿತು ವಿಚಾರಿಸಿದ ಹಿನ್ನೆಲೆಯಲ್ಲಿ ಎಸಿ ಹಾಗೂ ತಹಸೀಲ್ದಾರ್ ಚಂದ್ರಮೌಳಿ ಮಂಗಳವಾರ ದಾಸನದೊಡ್ಡಿಯ ಕಾಮೇಗೌಡರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ಕಾಮೇಗೌಡ, ಗ್ರಾಮಸ್ಥರು ತನಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರು ಹೇಳಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು, ಕಾಮೇಗೌಡರಿಂದ ತಮಗೆ ಆಗುತ್ತಿರುವ ತೊಂದರೆಗಳ ಬಗ್ಗೆ ದೂರುಗಳ ಮಳೆ ಸುರಿಸಿದರು. ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಎಸಿ ಸೂರಜ್, ಬುಧವಾರ ಬೆಳಗ್ಗೆ 10.30ಕ್ಕೆ ತಹಸೀಲ್ದಾರ್ ನೇತೃತ್ವದಲ್ಲಿ ಶಾಂತಿ ಸಭೆ ಏರ್ಪಡಿಸಲು ಸೂಚಿಸಿದ್ದೇನೆ. ಎರಡೂ ಬಣದವರನ್ನು ಸಭೆಗೆ ಕರೆಯುವಂತೆ ಸೂಚನೆ ನೀಡಲಾಗುವುದು ಎಂದರು.

    ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫೇಲ್: ಕಳೆನಾಶಕ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts