Donald Trump: ಎರಡು ತಿಂಗಳ ಹಿಂದೆ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ವಿರುದ್ಧ ಭಾರೀ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ ಡೋನಾಲ್ಡ್ ಟ್ರಂಪ್, ಈಗ ನಾಲ್ಕು ವರ್ಷಗಳ ನಂತರ ಶ್ವೇತಭವನಕ್ಕೆ ಅಮೆರಿಕಾದ ನೂತನ ಅಧ್ಯಕ್ಷರಾಗಿ ಕಾಲಿಟ್ಟಿದ್ದಾರೆ.
ಇಂದು ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಹೌಸ್ನಲ್ಲಿ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡೋನಾಲ್ಡ್ ಟ್ರಂಪ್ಗೆ ಯುಎಸ್ ಜನರಿಂದ ಅಭೂತಪೂರ್ವ ಬೆಂಬಲ ದೊರಕಿದೆ. ಉಪಾಧ್ಯಕ್ಷರಾಗಿ ಜೆಡಿ ವ್ಯಾನ್ಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರೆ ದೇಶದ ಪ್ರಧಾನಿಗಳು, ರಾಜಕೀಯ ಗಣ್ಯರು ಟ್ರಂಪ್ಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಭರ್ತಿ 200 ಆದೇಶಕ್ಕೆ ಸಜ್ಜಾಗಿರುವ ನೂತನ ಅಧ್ಯಕ್ಷರು, ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮುಂದಿನ ನಾಲ್ಕು ವರ್ಷಗಳಿಗೆ ಬೇಕಿರುವ ಬಹುಮುಖ್ಯ ಯೋಜನೆಗಳನ್ನು ಘೋಷಿಸಲಿದ್ದಾರೆ. ವಲಸೆ, ಇಂಧನ ಮತ್ತು ಸುಂಕಗಳಿಗೆ ಸಂಬಂಧಿಸಿದ ಹಲವಾರು ಕಾರ್ಯಕಾರಿ ಕ್ರಮಗಳ ಭರವಸೆಯನ್ನು ನೀಡಲಿದ್ದಾರೆ. ಪ್ರಮಾಣ ವಚನಕ್ಕೂ ಒಂದು ದಿನದ ಹಿಂದೆ ಮಾತನಾಡಿದ್ದ ಡೋನಾಲ್ಡ್ ಟ್ರಂಪ್, ನಮ್ಮ ಆಡಳಿತವು ದೇಶದ ಗಡಿಗಳ ಮೇಲಿನ ನಿಯಂತ್ರಣವನ್ನು ಶೀಘ್ರವಾಗಿ ಮರುಸ್ಥಾಪಿಸಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಬಡಾವಣೆ ಹಸ್ತಾಂತರಕ್ಕೆ ಒತ್ತಾಯಿಸಿ ಶ್ರೀರಾಂಪುರ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಅಂಚೆ ಚಳವಳಿ
“ಅಮೆರಿಕದ ಇತಿಹಾಸದಲ್ಲಿಯೇ ಅತಿದೊಡ್ಡ ಗಡಿಪಾರು ಪ್ರಕ್ರಿಯೆಯನ್ನು ನಾವು ಪ್ರಾರಂಭಿಸಲಿದ್ದೇವೆ” ಎಂದು ಟ್ರಂಪ್ ಒತ್ತಿ ಹೇಳಿದ್ದರು. ಆದರೆ, ಟ್ರಂಪ್ ಮಾತಿನಂತೆ ದೇಶದಲ್ಲಿ ನೆಲೆಸಿರುವ ಸಾವಿರಾರು ಅಕ್ರಮ ವಲಸಿಗರನ್ನು ತೆಗೆದುಹಾಕುವ ಕಾರ್ಯಾಚರಣೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ದುಬಾರಿ ಬೆಲೆಯನ್ನೇ ತೆರಬೇಕಾಗುತ್ತದೆ. ಹೀಗಾಗಿ ವಲಸಿಗರನ್ನು ಹೇಗೆ ಹೊರಹಾಕುತ್ತಾರೆಂಬ ಕುತೂಹಲ ಅಲ್ಲಿನ ಜನತೆಗಿಂತ ಇತರೆ ದೇಶಗಳ ಜನರಲ್ಲಿ ಹೆಚ್ಚಾಗಿ ಕಾಡುತ್ತಿದೆ ಎಂದೇ ಹೇಳಬಹುದು,(ಏಜೆನ್ಸೀಸ್).