ಯೋಜನೆ ಪೂರ್ಣವಾದರೂ ಪಾವತಿಯಾಗದ ಭೂ ಪರಿಹಾರ: ಸಚಿವ ಎಂ.ಬಿ.ಪಾಟೀಲ್ ಸಿಡಿಮಿಡಿ | Only half TMC ft water use from Hidakal Dam

M B Patil
Published on

ಬೆಂಗಳೂರು: ವಿಜಯಪುರ ಜಿಲ್ಲೆಯ ತುಬಚಿ-ಬಬಲೇಶ್ವರ್ ಏತ ನೀರಾವರಿ ಯೋಜನೆ ಕಾಮಗಾರಿ ಮುಗಿದು, ಕಾಲುವೆಗಳಿಗೆ ನೀರು ಹರಿಯುತ್ತಿದೆ. ಆದರೂ ಭೂಸ್ವಾಧೀನ ಪರಿಹಾರ ಮೊತ್ತ 437 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದಕ್ಕೆ ಅಧಿಕಾರಿಗಳ ವಿರುದ್ಧ ಕೈಗಾರಿಕಾ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಿಡಿಮಿಡಿಗೊಂಡರು.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ಸಭೆ ಸೋಮವಾರ ನಡೆಸಿದ ಅವರು, ತಾಂತ್ರಿಕ ಕಾರಣವೊಡ್ಡಿ 3,048 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿಲ್ಲವೆಂದು ತರಾಟೆಗೆ ತೆಗೆದುಕೊಂಡರು.

ಯೋಜನೆಯಡಿ 52,700 ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಪೈಕಿ 37 ಸಾವಿರ ಎಕರೆ ಬಬಲೇಶ್ವರ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಮುಖ್ಯ, ವಿತರಣಾ, ಉಪ, ಹೊಲಗಾಲುವೆಗಳ ನಿರ್ಮಾಣಕ್ಕೆ ರೈತರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಅಂಥವರಿಗೆ ಪರಿಹಾರದ ಹಣವನ್ನೇ ನೀಡಿಲ್ಲ. ಭೂಸ್ವಾಧೀನ ಅಧಿಕಾರಿಗಳು ಹಾಗೂ ನೀರಾವರಿ ನಿಗಮದ ಅಧಿಕಾರಿಗಳ ಸಮನ್ವಯದ ಕೊರತೆಯೇ ಇದಕ್ಕೆಲ್ಲ ಕಾರಣ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ, ತಾಂತ್ರಿಕ ನೆಪ ಬಿಟ್ಟು ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಎಂ.ಬಿ.ಪಾಟೀಲ ಸೂಚಿಸಿದರು.

ತಪ್ಪಿತಸ್ಥರ ಬಂಧನ

ವಿಜಯಪುರದ ಇಟ್ಟಿಗೆ ಭಟ್ಟಿಯಲ್ಲಿ ಕಾರ್ಮಿಕರ ಮೇಲೆ ನಡೆದಿರುವ ಅಮಾನುಷ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಬಂಧಿಸಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಅಮಾನವೀಯ ಪ್ರಕರಣದ ಬಗ್ಗೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆಗೆ ಮಾತನಾಡಿರುವೆ. ಬೆಂಗಳೂರಿನಲ್ಲೇ ಕರ್ತವ್ಯದ ಮೇಲೆ ಇರುವ ಜಿಲ್ಲಾಧಿಕಾರಿ ಜತೆಗೂ ಮಾತನಾಡಿ ಸೂಕ್ತ ಕ್ರಮದ ಸೂಚನೆ ನೀಡಿರುವೆ ಎಂದರು.

ಅರ್ಧ ಟಿಎಂಸಿ ಅಡಿ ನೀರು ಬಳಕೆ

ಹುಬ್ಬಳ್ಳಿ-ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ಬೆಳಗಾವಿ ಜಿಲ್ಲೆಯಲ್ಲಿರುವ ಹಿಡಕಲ್ ಅಣೆಕಟ್ಟೆಯಿಂದ ಅರ್ಧ ಟಿಎಂಸಿ ಅಡಿ ನೀರು ಮಾತ್ರ ಬಳಸಲಾಗುತ್ತಿದೆ. ಈ ಪ್ರದೇಶಕ್ಕೆ ಜಲಾಶಯಕ್ಕೆ ನಾಲ್ಕು ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ.

ಅಣೆಕಟ್ಟೆಯಿಂದ ನೇರವಾಗಿ ನೀರು ಹರಿಸುತ್ತಿಲ್ಲ, ಕೆಳಭಾಗದ ನದಿಯಿಂದ ಈ ನೀರನ್ನು ಹುಬ್ಬಳ್ಳಿ- ಧಾರವಾಡ ಕೈಗಾರಿಕಾ ಪ್ರದೇಶಗಳಿಗೆ ಹರಿಸುತ್ತಿದ್ದು, ನೆರೆಹೊರೆಯ ಜಿಲ್ಲೆಗಳ ಜನರು ಪರಸ್ಪರ ಅನ್ಯೋನ್ಯತೆಯಿಂದ ಇರಬೇಕು ಎಂದು ಎಂ.ಬಿ.ಪಾಟೀಲ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನಲ್ಲಿ ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಗಳಿಗೆ ನಾಲ್ಕು ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಇದರಲ್ಲಿ ಪ್ರತಿನಿತ್ಯ ಕೇವಲ 45 ದಶಲಕ್ಷ ಲೀಟರ್ (0.58 ಟಿಎಂಸಿ ಅಡಿ) ನೀರು ಬಳಸಲು ತೀರ್ಮಾನಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಹಿಡಕಲ್ ಜಲಾಶಯದಿಂದ ಹಾಲಿ ಕೃಷಿ ಜಮೀನಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಅಬಾಧಿತ. ಕುಡಿಯುವ ನೀರಿಗೂ ತೊಂದರೆಯಾಗುವುದಿಲ್ಲ, ಯೋಜನೆ ವಿರುದ್ಧ ಮಾತನಾಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಂ.ಬಿ.ಪಾಟೀಲ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net