ತಮ್ಮಿಬ್ಬರ ಮಕ್ಕಳೊಂದಿಗೆ ಲಂಡನ್​ನಲ್ಲೇ ಉಳಿಯಲಿದ್ದಾರೆ ವಿರಾಟ್ ದಂಪತಿ? ಈ 4 ಕಾರಣಗಳೇ ಸಾಕ್ಷಿ ಅಂತಾರೆ ನೆಟ್ಟಿಗರು

ವಿಜಯವಾಣಿ - 2024-07-07T212854.492
Published on

ನವದೆಹಲಿ: 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಟ್ರೋಫಿ ಗೆದ್ದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ, ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್​ಗಳ ಆಕರ್ಷಕ ಇನ್ನಿಂಗ್ಸ್ ನೀಡಿದರು. ತಂಡದ ಗೆಲುವಿನಲ್ಲಿ ಸ್ಟಾರ್​ ಆಗಿ ಮಿಂಚಿದ 'ರನ್​ ಮಷಿನ್'​, ಟೂರ್ನಿಯ ಪ್ರಾರಂಭದಲ್ಲಿ ಕಳಪೆ ಫಾರ್ಮ್​ನಿಂದ ಕುಗ್ಗಿದ್ದರು. ಆದರೆ, ಅಂತಿಮ ಹಣಾಹಣಿಯಲ್ಲಿ ತಮ್ಮ ಸಾಮರ್ಥ್ಯವೇನು? 'ಕಿಂಗ್' ಎಂಬ ಪದದ ಅರ್ಥವೇನು? ಎಂಬುದನ್ನು ಅದ್ಭುತವಾಗಿ ಸಾಬೀತುಪಡಿಸಿದರು. ಈ ಖುಷಿಯಲ್ಲೇ ತಮ್ಮ ನೆಚ್ಚಿನ ಆಟಗಾರನನ್ನು

ಸಂಭ್ರಮಿಸಿದ ಅಭಿಮಾನಿಗಳು, 'ವಿರಾಟ ದರ್ಶನ'ಕ್ಕಾಗಿ ಮುಂಬೈ ರಸ್ತೆಗಳಲ್ಲಿ ಕಾದುಕುಳಿತ್ತಿದ್ದರು. ಫ್ಯಾನ್ಸ್​ ಖುಷಿಪಡಿಸಿದ ಬಳಿಕ ಇದೀಗ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ವಿರಾಟ್ ನಿರ್ಧರಿಸಿದ್ದಾರೆ.

ಒಂದೆಡೆ ವಿಶ್ವಕಪ್ ಗೆದ್ದ ವಿರಾಟ್ ಕೊಹ್ಲಿ ತಮ್ಮ ಕುಟಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನಿರ್ಧರಿಸಿದ್ದಾರೆ ಎಂಬುದು ಇದೊಂದು ವಿಚಾರದಿಂದ ಸ್ಪಷ್ಟವಾಗುತ್ತಿದೆ. ಎರಡನೇ ಮಗು ಅಕಾಯ್​ಗೆ ಪೋಷಕರಾದಾಗಿನಿಂದ ವಿರಾಟ್​ ದಂಪತಿಗಳು ಲಂಡನ್‌ಗೆ ಶಿಫ್ಟ್ ಆಗುವ ಯೋಚನೆಯಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣವನ್ನು ಸುತ್ತುವರೆದಿವೆ. ತಮ್ಮ ಪುತ್ರಿ ವಮಿಕಾ ಹಾಗೂ ಅಕಾಯ್​ ಜತೆಗೆ ವಿರಾಟ-ಅನುಷ್ಕಾ ಜೋಡಿ ಇಂಗ್ಲೆಂಡ್​ಗೆ ಹೋಗುವುದು ಖಚಿತ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡಿದ್ದು ಕೊಹ್ಲಿ ಅವರ ಟಿ20 ನಿವೃತ್ತಿ. ಅಸಲಿಗೆ ನೆಟ್ಟಿಗರ ಪ್ರಕಾರ, ವಿರಾಟ್ ದಂಪತಿ ಖಚಿತವಾಗಿ ಲಂಡನ್​ನಲ್ಲೇ ಉಳಿಯಲು ಇರುವ 4 ಕಾರಣಗಳು ಈ ಕೆಳಕಂಡಂತಿವೆ.

1. ಟಿ20 ಕ್ರಿಕೆಟ್​ ನಿವೃತ್ತಿ: ರೋಹಿತ್ ಶರ್ಮ ನಾಯಕತ್ವದಲ್ಲಿ ವಿಶ್ವಕಪ್ ಗೆಲ್ಲುತ್ತಿದ್ದಂತೆ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ, ಅಭಿಮಾನಿಗಳತ್ತ ಕೈಬೀಸಿ ಧನ್ಯವಾದ ತಿಳಿಸಿದರು. ಕೊಹ್ಲಿ ಅವರ ನಿವೃತ್ತಿಗೂ ಲಂಡನ್​ ಹೋಗುವುದಕ್ಕೂ ಸಂಬಂಧವಿದೆ ಎಂದು ನೆಟ್ಟಿಗರು ಭಾವಿಸಿದ್ದಾರೆ.

2. ಪುತ್ರ ಅಕಾಯ್​ ಜನಿಸಿದ್ದು ಲಂಡನ್​: ಮದುವೆಗೂ ಮುನ್ನ ಲಂಡನ್​ನಲ್ಲಿ ಹೆಚ್ಚು ಸಮಯ ಕಳೆದಿದ್ದ ವಿರಾಟ್ ಜೋಡಿ, ತಮ್ಮ ಎರಡನೇ ಮಗುವಿಗೆ ಇಲ್ಲಿಯೇ ಜನ್ಮ ನೀಡಲು ನಿರ್ಧರಿಸಿದ್ದರು. ಅಕಾಯ್​ ಹುಟ್ಟಿದ ಬಳಿಕ ಎರಡು ತಿಂಗಳು ಲಂಡನ್​ನಲ್ಲೇ ಉಳಿದಿದ್ದ ವಿರಾಟ್ ಮತ್ತು ಅನುಷ್ಕಾ, ವಿಶ್ವಕಪ್ ಮತ್ತು ಐಪಿಎಲ್​ಗಾಗಿ ಭಾರತಕ್ಕೆ ಮರಳಿದರು.

3. ಆಗಾಗ್ಗೆ ಲಂಡನ್​ನಲ್ಲಿ ಕಾಣಿಸಿಕೊಳ್ಳುವ ವಿರುಷ್ಕಾ: ಈ ನಗರದ ಶಾಪಿಂಗ್‌ ಮಾಲ್​ ಮತ್ತು ರೆಸ್ಟೋರೆಂಟ್‌ಗಳಲ್ಲಿ ಹೆಚ್ಚು ಸಮಯ ಕಳೆಯುವ ಅನುಷ್ಕಾ ಮತ್ತು ವಿರಾಟ್, ಎರಡನೇ ಮಗುವಿನ ಜನನಕ್ಕಾಗಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದರು. ಆಗಾಗ್ಗೆ ಇಲ್ಲಿಗೆ ವಿರಾಟ್ ಜೋಡಿ ಆಗಮಿಸುವುದು ಕೂಡ ಒಂದು ಬಲವಾದ ಕಾರಣವಿರಬಹುದು ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ.

4. ಸಾಧಾರಣ ಜೀವನ: ನಿವೃತ್ತಿ ಸಮೀಪದಲ್ಲಿರುವಾಗ ಬಹುಶಃ ಯುಕೆಯಲ್ಲಿ ವಿರಾಟ್​ ವಾಸಿಸಬಹುದು ಎಂದು ಒಂದಷ್ಟು ವರದಿಗಳು ಉಲ್ಲೇಖಿಸಿದೆ. ಕೊಹ್ಲಿ ಪ್ರಕಾರ, ಅವರಿಗೆ ಯುರೋಪಿನಲ್ಲಿ ಉಳಿಯಲು ಇಷ್ಟವಂತೆ. ಕಾರಣ, ಅಲ್ಲಿರುವ ಜನರು ತಮ್ಮನ್ನು ಗುರುತಿಸಲು ಸಾಧ್ಯವಿಲ್ಲ. ಇದರಿಂದ ನನಗೆ ಸಾಮಾನ್ಯ ಜೀವನ ನಡೆಸಲು ಸಹಾಯವಾಗುತ್ತದೆ ಎಂದು ಹೇಳಿದ್ದರು. ಇದೆಲ್ಲವೂ ನೆಟ್ಟಿಗರಿಗೆ ವಿರಾಟ್ ಜೋಡಿ ಶಾಶ್ವತವಾಗಿ ಲಂಡನ್​ನಲ್ಲಿಯೇ ನೆಲೆಸುತ್ತಾರೆ ಎಂಬ ಸೂಚನೆ ಕೊಟ್ಟಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net