ಚಿಕಿತ್ಸೆಗೆಂದು ದಾಖಲಾಗಿದ್ದ ಡಾಕ್ಟರ್​ ಬೆಳಗಾಗುವಷ್ಟರಲ್ಲಿ ಇಲ್ಲ!; ಪತ್ನಿಗೆ ಶವ ಸಿಗುವವರೆಗೂ ಆಸ್ಪತ್ರೆಯವರಿಗೆ ವಿಷ್ಯ ಗೊತ್ತಾಗ್ಲಿಲ್ಲ!

Dr Poonachcha
Published on

ಕೊಡಗು: ಚಿಕಿತ್ಸೆಗೆಂದು ದಾಖಲಾಗಿದ್ದ ವೈದ್ಯರೊಬ್ಬರು ತಡರಾತ್ರಿ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ಮಡಿಕೇರಿಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಡಾ.ಕೆ.ಪೂಣಚ್ಚ ಸಾವಿಗೀಡಾದವರು. ಕಣ್ಣಿನ ಆಪರೇಷನ್​ಗೆಂದು ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದರು. ಇಂದು ಅವರಿಗೆ ಆಪರೇಷನ್ ಆಗಬೇಕಿತ್ತು. ಆದರೆ ಅಷ್ಟರಲ್ಲಾಗಲೇ ಅವರು ನಾಲ್ಕನೇ ಮಹಡಿಯಿಂದ ಬಿದ್ದು ದುರಂತ ಸಾವಿಗೆ ಒಳಗಾಗಿದ್ದಾರೆ.

ತಡರಾತ್ರಿ ಮೂರು ಗಂಟೆ ಸುಮಾರಿಗೆ ಶೌಚಕ್ಕೆಂದು ಹೋಗಿದ್ದ ಅವರು ಅಲ್ಲಿಂದ ದಾರಿ ತಪ್ಪಿ ನಾಲ್ಕನೇ ಮಹಡಿಯ ಟೆರೇಸ್​ಗೆ ಹೋಗಿದ್ದರು. ಟೆರೇಸ್ ಮೇಲಿನ ಪಾಚಿಯಿಂದಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಬೆಳಗ್ಗೆ 6 ಗಂಟೆಯವರೆಗೂ ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ಇರಲಿಲ್ಲ. ಬಳಿಕ ಪೂಣಚ್ಚ ಅವರ ಪತ್ನಿ ಬಂದು ಹುಡುಕತೊಡಗಿದಾಗ ಶವ ಪತ್ತೆಯಾಗಿದೆ. ಆಸ್ಪತ್ರೆಯಲ್ಲಿನ ಸುರಕ್ಷತೆ ಕುರಿತು ಪೂಣಚ್ಚ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net