"ಹಿಂದೆ ಮಹಿಳೆಯರ ಸೊಂಟ ನಂಬರ್ 8 ರಂತೆ ಇರುತ್ತಿತ್ತು, ಈಗ ಡ್ರಮ್ಮಿನಂತಾಗಿದ್ದಾರೆ" ಎಂದ ಡಿಎಂಕೆ ಅಭ್ಯರ್ಥಿ

dmk
Published on

ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದ್ರಾವಿಡ ಮುನ್ನೇತ್ರ ಕಜಗಮ್​ (ಡಿಎಂಕೆ) ಅಭ್ಯರ್ಥಿಯಾಗಿರುವ ದಿಂಡಿಗುಲ್ ಲಿಯೋನಿ ಮಹಿಳೆಯರ ಬಗ್ಗೆ ಅವಮಾನಕರ ಹೇಳಿಕೆ ನೀಡಿ ನೆಟ್ಟಿಗರ ಕೋಪಕ್ಕೆ ತುತ್ತಾಗಿದ್ದಾರೆ. ಡಿಎಂಕೆ ಪರ ಚುನಾವಣಾ ಪ್ರಚಾರ ಮಾಡುವ ಸಂದರ್ಭದಲ್ಲಿ ಮಹಿಳೆಯರ ದೇಹದ ಆಕಾರದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿರುವ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಿಳೆಯರನ್ನು ಹಸುಗಳಿಗೆ ಹೋಲಿಸಿದ್ದಲ್ಲದೆ, ಈಗಿನ ಕಾಲದ ಮಹಿಳೆಯರು ವಿದೇಶೀ ಹಸುಗಳ ಹಾಲು ಕುಡಿದು ದಪ್ಪಗಾಗಿಬಿಟ್ಟಿದ್ದಾರೆ. ಮುಂಚಿನ ಕಾಲದ ಹೆಂಗಸರ ನಡು ಸಂಖ್ಯೆ 8 ರಂತೆ ಬಳುಕುವಂತಿರುತ್ತಿತ್ತು. ಈಗಿನವರದು ಡ್ರಮ್ಮಿನ ತರಹ ಆಗಿದೆ ಎಂದು ಅಪಹಾಸ್ಯ ಮಾಡಿ ಮಾತನಾಡಿದ್ದಾರೆ, ಲಿಯೋನಿ. ಇವರು ಮಹಿಳೆಯರನ್ನು ಹೀಗಳೆಯುವ ಮಾತುಗಳನ್ನಾಡಿರುವುದು ಇದೇ ಮೊದಲಲ್ಲ ಎನ್ನಲಾಗಿದೆ.

ವಿಶ್ಮಾತ್ಮ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಲಿಯೋನಿ ಅವರ ಭಾಷಣದ ತುಣುಕನ್ನು ಶೇರ್ ಮಾಡಿ, "ಡಿಎಂಕೆ ಅಧ್ಯಕ್ಷರೇ, ಮಹಿಳೆಯರ ಸುರಕ್ಷತೆ ಬಗ್ಗೆ ಮಾತಾಡುವ ಮುಂಚೆ ಇಂಥ ನಾಯಕರನ್ನು ಪಕ್ಷದಿಂದ ಹೊರಹಾಕಿ" ಎಂದಿದ್ದಾರೆ.

ತಮಿಳಿನಲ್ಲಿ ಮಾತನಾಡಿರುವ ಲಿಯೋನಿ, "ಮಹಿಳೆಯರು ಈಗ ವಿದೇಶೀ ಹಸುಗಳ ಹಾಲು ಕುಡಿಯುತ್ತಿದ್ದಾರೆ. ಅವರು ಹೆಚ್ಚು ತೂಕ ಗಳಿಸಿರುವುದಕ್ಕೆ ಇದೇ ಕಾರಣ. ಆ ಕಾಲದಲ್ಲಿ ಮಹಿಳೆಯ ಸೊಂಟ ನಂಬರ್ 8 ಅನ್ನು ಹೋಲುತ್ತಿತ್ತು. ಮಗುವನ್ನು ಎತ್ತಿಕೊಂಡರೆ ಅದು ಸೊಂಟದ ಮೇಲೆ ಹಾಗೇ ಕೂರುತ್ತಿತ್ತು. ಈಗ ಅವರು ಡ್ರಮ್ಮಿನಂತೆ ಆಗಿದ್ದಾರೆ. ಆದ್ದರಿಂದ ತಮ್ಮ ಮಕ್ಕಳನ್ನು ಸೊಂಟದ ಮೇಲೆ ಎತ್ತಿಕೊಳ್ಳಲಾಗುತ್ತಿಲ್ಲ" ಎಂದಿದ್ದಾರೆ.

ಇದು ಯಾವ ರೀತಿಯ ಪ್ರಚಾರ ಭಾಷಣ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಬಿಜೆಪಿ ನಾಯಕಿ ಗಾಯತ್ರಿ ರಘುರಾಮ್ ಅವರು, "ಎಂತಹ ನಾಚಿಕೆಯ ವಿಷಯ. ಅವರು ಯಾವ ಹಾಲು ಕುಡಿಯುತ್ತಾರಂತೆ ? ಡಿಎಂಕೆ ಪಕ್ಷದ ಜನರು ಮಹಿಳೆಯರಿಗೆ ತೋರಿಸುವ ಗೌರವ ಇದೇನಾ ?" ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net