ಕಗ್ಗಂಟಾದ ಸಿಎಂ ಆಯ್ಕೆ: ಡಿ.ಕೆ.ಶಿವಕುಮಾರ್​ ಹೋರಾಟಕ್ಕೀಗ ಸಹೋದರ ನೇರ ಎಂಟ್ರಿ!

DK Brothers
Published on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆದಿರುವ ಕಾಂಗ್ರೆಸ್​ಗೆ ಈಗ ಸಿಎಂ ಆಯ್ಕೆಯೇ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇನ್ನೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಈ ನಡುವೆ ಸಿಎಂ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್ ಪಟ್ಟು ಬಿಗಿಗೊಳಿಸಿದ್ದು, ಈಗ ಅವರ ಸಹೋದರ ಡಿ.ಕೆ.ಸುರೇಶ್ ಕೂಡ ನೇರ ಎಂಟ್ರಿ ಆಗಿದ್ದಾರೆ.

ಸಿಎಂ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಇಬ್ಬರೂ ತಮ್ಮ ಪಟ್ಟು ಬಿಗಿಗೊಳಿಸಿದ್ದು, ಯಾರನ್ನು ಸಿಎಂ ಆಗಿ ಆಯ್ಕೆ ಮಾಡಬೇಕು ಎಂಬ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಈ ನಡುವೆ ಸಿಎಂ ಆಯ್ಕೆ ನಿರ್ಧಾರ ಹೈಕಮಾಂಡ್​ ವಿವೇಚನೆಗೆ ಬಿಟ್ಟಿದ್ದು ಎಂಬ ನಿರ್ಣಯವಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೇ ದೆಹಲಿಯಲ್ಲಿದ್ದಾರೆ. ಮತ್ತೊಂದೆಡೆ ದೆಹಲಿಗೆ ಬರುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿದ್ದರೂ ಅವರು ಹೋಗಿಲ್ಲ.

ಅನಾರೋಗ್ಯದ ನೆಪ ಹೇಳಿ ಡಿ.ಕೆ.ಶಿವಕುಮಾರ್​ ಬೆಂಗಳೂರಿನಲ್ಲೇ ಉಳಿದಿದ್ದು, ಈ ಮೂಲಕ ಹೈಕಮಾಂಡ್​ಗೆ ತಮ್ಮ ಅಸಮಾಧಾನ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಪರಿಸ್ಥಿತಿಯನ್ನು ಎರಡೂ ರೀತಿಯಲ್ಲಿ ನಿಭಾಯಿಸುವ ಹಿನ್ನೆಲೆಯಲ್ಲಿ ಸಹೋದರ ಡಿ.ಕೆ.ಸುರೇಶ್​ ಅವರನ್ನು ದೆಹಲಿಗೆ ಕಳುಹಿಸಿದ್ದಾರೆ.

ಕೆಲವು ಶಾಸಕರ ದಂಡಿನೊಂದಿಗೆ ದೆಹಲಿಗೆ ತೆರಳಿರುವ ಡಿ.ಕೆ. ಸುರೇಶ್, ಸದ್ಯಕ್ಕೆ ದೆಹಲಿಗೆ ಬರುವುದು ಬೇಡ ಎಂದೂ ಸಹೋದರನಿಗೆ ಸಂದೇಶ ರವಾನಿಸಿದ್ದಾರೆ. ನಾನು ಅಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಬಾ ಎಂದು ಹೇಳಿದ ಮೇಲೆಯೇ ನೀನು ಹೊರಡು ಎಂಬ ಸಲಹೆಯನ್ನೂ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಯಾರು ಎಂಬ ಆಯ್ಕೆ ಸದ್ಯಕ್ಕೆ ತೀರ್ಮಾನ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಸದ್ಯ ಬೆಂಗಳೂರಿನ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ವಿಶ್ರಾಂತಿಯಲ್ಲಿದ್ದು, ವೈದ್ಯರು ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ರಕ್ತದೊತ್ತಡ, ಮಧುಮೇಹ ಇತ್ಯಾದಿ ಪರೀಕ್ಷೆ ಮಾಡಿ ಹೊಟ್ಟೆನೋವಿಗೆ ಮಾತ್ರೆ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net