

ಬೆಂಗಳೂರು: ಕೇಂದ್ರ ಸರ್ಕಾರ ರೂಪಿಸಿರುವ ಬಾಡಿಗೆದಾರರ ಅಧಿನಿಯಮ ರಾಜ್ಯದಲ್ಲಿ ಯಾವತ್ತು ಜಾರಿಗೆ ಬರಲಿದೆ ಎಂಬ ಕುರಿತು ಇದ್ದ ಕುತೂಹಲಕ್ಕೆ ಇದೀಗ ಉತ್ತರ ಎಂಬಂತೆ ಕಂದಾಯ ಸಚಿವ ಆರ್. ಅಶೋಕ್ ಒಂದಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಅವರು ಈ ವಿಷಯ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷ ಫ್ಲ್ಯಾಟ್ಗಳಿದ್ದು, ಬಾಡಿಗೆದಾರರು ಮತ್ತು ಮಾಲೀಕರ ನಡುವೆ ಜಗಳವಿತ್ತು. ಅವರ ನಡುವಿನ ಗೊಂದಲ ಹಾಗೇ ಉಳಿಯುತ್ತಿತ್ತು. ಮಾತ್ರವಲ್ಲ, ಕೋರ್ಟ್-ಕಚೇರಿ ಅಲೆಯಬೇಕಾಗುತ್ತಿತ್ತು ಎಂದ ಅಶೋಕ್, ಬಾಡಿಗೆದಾರರ ಅಧಿನಿಯಮಕ್ಕೆ ಪರಿವರ್ತನೆ ತಂದಿಲ್ಲ, ಮನೆ ಮಾಲೀಕರ ಹಿತರಕ್ಷಣೆಗೆ ಮುಂದಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರ ಜೂನ್ 2ರಂದು ಈ ಕಾನೂನನ್ನು ತಂದಿದೆ. ಅದನ್ನೇ ನಾವು ಜಾರಿಗೆ ತರುತ್ತಿದ್ದೇವೆ. ಇದರಿಂದ ಬಾಡಿಗೆದಾರರು ಹಾಗೂ ಮನೆಮಾಲೀಕರು ಇಬ್ಬರಿಗೂ ಅನುಕೂಲವಾಗಲಿದೆ. ಆದರೆ ಈ ಕಾನೂನನ್ನು ಇನ್ನೂ ಜಾರಿಗೊಳಿಸಿಲ್ಲ ಎಂಬುದನ್ನು ಸ್ಪಷ್ಟಗೊಳಿಸಿರುವ ಅವರು, ಅದನ್ನು ಸರ್ಕಾರದ ಆ್ಯಪ್ನಲ್ಲಿ ಅಪ್ಲೋಡ್ ಮಾಡಬೇಕಿದೆ. ಆ ಬಗ್ಗೆ ಚಿಂತನೆ ನಡೆಸಿದ್ದು, ಸಲಹೆ-ಸೂಚನೆಗಳನ್ನು ಕೊಟ್ಟ ನಂತರ ಜಾರಿಗೆ ತರಲಿದ್ದೇವೆ ಎಂಬುದಾಗಿ ಹೇಳಿದ್ದಾರೆ.